ದೊಡ್ಡಬಳ್ಳಾಪುರ : ತಾಲೂಕಿನ ಮೆಣಸಿ ಕಾಲೋನಿಯಲ್ಲಿ ಸುಮಾರು 50 ದಲಿತ ಕುಟುಂಬಗಳು ವಾಸವಾಗಿವೆ. 40ಕ್ಕೂ ಹೆಚ್ಚು ಕುಟುಂಬಗಳ ಜಮೀನು ಬಲಾಢ್ಯರ ಪಾಲಾಗಿದೆ. ಇನ್ನೂ ವಾಸವಾಗಿರುವ ಮನೆಗಳು ಈಗಲೋ ಆಗಲೋ ಬೀಳುವ ಸ್ಥಿತಿಯಲ್ಲಿವೆ. ಕುಡಿತದ ಚಟಕ್ಕೆ ದಾಸರಾದ ಇವರು ತಮ್ಮ ಸಾಗುವಳಿ ಜಮೀನನ್ನು ಮಾರಾಟ ಮಾಡಿ ದಾರುಣ ಸ್ಥಿತಿಯಲ್ಲಿ ಜೀವನ ಮಾಡುತ್ತಿದ್ದಾರೆ.
ದಲಿತರ ಸ್ವಾವಲಂಬಿ ಜೀವನಕ್ಕೆ ದಾರಿ ಮಾಡಲು ಸರ್ಕಾರ ಪ್ರತಿ ಕುಟುಂಬಕ್ಕೂ 3 ಎಕರೆ ಜಮೀನು ನೀಡಿದೆ. ಸರ್ಕಾರ ನೀಡಿದ ಜಮೀನಿನಲ್ಲಿ ಕೃಷಿ ಮಾಡಿ ನೆಮ್ಮದಿಯ ಜೀವನ ಮಾಡುತ್ತಿದ್ದರು. ಇದೇ ಗ್ರಾಮದ ರಾಜಣ್ಣ ಮತ್ತು ನಾರಾಯಣಸ್ವಾಮಿ ಎಂಬುವರು ಗ್ರಾಮಕ್ಕೆ ಭಟ್ಟಿ ಸಾರಾಯಿ ತಂದು, 15 ವರ್ಷಗಳ ಹಿಂದೆ ದಲಿತರಿಗೆ ಕುಡಿತದ ಚಟ ಅಂಟಿಸಿ, ಅವರ ಜಮೀನನ್ನು ಬೇರೆಯವರಿಗೆ ಮಾರಾಟ ಮಾಡಿಸಿದ್ದಾರೆ.
ಬೆಂಗಳೂರಿನ ಧನಿಕರಿಗೆ ಲಕ್ಷ ಲಕ್ಷಕ್ಕೆ ಮಾರಾಟ ಮಾಡಿಸಿದ ರಾಜಣ್ಣ ಮತ್ತು ನಾರಾಯಣ ಜಮೀನು ಮಾಲೀಕರಿಗೆ ಕೊಟ್ಟದ್ದು ಮಾತ್ರ ಬಿಡಿಕಾಸು. ಬಾಕಿ ಹಣ ಕೊಡುವಂತೆ ಕೇಳಿದ್ರೆ ದೌರ್ಜನ್ಯ ನಡೆಸಿ ಅವರ ಬಾಯಿ ಮುಚ್ಚಿಸಿದ್ದಾರೆ. ಇದೀಗ ಬಾಕಿ ಹಣ ಕೊಡಿಸುವಂತೆ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರಿಗೆ ದೂರು ನೀಡಿದ್ರೆ, ಪೊಲೀಸರು ದೂರು ತೆಗೆದುಕೊಳ್ಳುತ್ತಿಲ್ಲವೆಂದು ಜಮೀನು ಕಳೆದುಕೊಂಡ ದಲಿತರು ನೋವು ತೊಡಿಕೊಳ್ಳುತ್ತಾರೆ.
ಇದನ್ನೂ ಓದಿ: ನದಿ ಜೋಡಣೆ ಯೋಜನೆಗೆ ವಿರೋಧ : ಸ್ವರ್ಣವಲ್ಲಿ ಸ್ವಾಮೀಜಿ ನೇತೃತ್ವದಲ್ಲಿ ಜನಾಂದೋಲನಕ್ಕೆ ಸಜ್ಜು
ಜಮೀನು ಕಳೆದುಕೊಂಡವರ ಸ್ಥಿತಿ ನಿಜಕ್ಕೂ ಶೋಚನೀಯವಾಗಿದೆ. ಮನೆ ಕಟ್ಟಿಕೊಳ್ಳಲು ಸರ್ಕಾರದಿಂದ ಅನುದಾನ ಬಿಡುಗಡೆಯಾದರೂ ಅದರ ಸದ್ಭಳಕೆಯಾಗದೆ ವಾಪಸ್ ಆಗಿದೆ. ಜಮೀನು ಕಳೆದುಕೊಂಡ ಇವರು ಸಣ್ಣಪುಟ್ಟ ಕೂಲಿ ಮಾಡಿ ಜೀವನ ಮಾಡುತ್ತಿದ್ದಾರೆ. ಬೆಂಗಳೂರಿನಿಂದ ಕೂದಳೆಲೆ ದೂರಲ್ಲಿರುವ ಇವರ ಸ್ಥಿತಿ ಕಾಡಂಚಿನಲ್ಲಿರುವ ಅರಣ್ಯವಾಸಿಗಳಿಗಿಂತ ಕೀಳಾಗಿದೆ.