ದೇವನಹಳ್ಳಿ (ಬೆಂಗಳೂರು ಗ್ರಾಮಾಂತರ): ಜಿಲ್ಲೆಯಾದ್ಯಂತ ಕಳೆದ ಮೂರು ದಿನಗಳಿಂದ ಸುರಿದ ಅಕಾಲಿಕ ಮಳೆ, ಗಾಳಿಯಿಂದ 30.03 ಹೆಕ್ಟೇರ್ ವಿಸ್ತೀರ್ಣದಲ್ಲಿ ಬೆಳೆದ ಬೆಳೆಗಳು ನಾಶವಾಗಿವೆ. ಮುಂಗಾರು ಮಳೆ ಆರಂಭದ ಹಿನ್ನೆಲೆ ವಿಪತ್ತು ಸನ್ನದ್ಧತೆ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಆರ್ ಲತಾ ಅವರು ಅಧಿಕಾರಿಗಳಿಗೆ ಸೂಚಿಸಿದರು.
ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ನಡೆದ ಮುಂಗಾರು ಮಳೆ ವಿಪತ್ತು ಸನ್ನದ್ಧತೆ ಕ್ರಮ ಕೈಗೊಳ್ಳುವ ಕುರಿತಾಗಿ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ದೊಡ್ಡಬಳ್ಳಾಪುರ ತಾಲೂಕಿನಲ್ಲಿ 1.31 ಹೆಕ್ಟೇರ್ ಹಾಗೂ ಹೊಸಕೋಟೆ ತಾಲೂಕಿನಲ್ಲಿ 5.62 ಹೆಕ್ಟೇರ್ ಸೇರಿದಂತೆ ಒಟ್ಟು 6.93 ಹೆಕ್ಟೇರ್ ರಷ್ಟು ವಿರ್ಸೀರ್ಣದ ಕೃಷಿ ಬೆಳೆ ಸ್ವೀಟ್ ಕಾರ್ನ್ (ಸಿಹಿ ಮೆಕ್ಕೆಜೋಳ) ಬೆಳೆಗೆ ಹಾನಿಯಾಗಿದೆ. ತೋಟಗಾರಿಕೆ ಬೆಳೆ ಮಾವು 11.70 ಹೆಕ್ಟೇರ್, ಟೊಮೆಟೋ 2 ಹೆಕ್ಟೇರ್, ಸೇವಂತಿಗೆ 5 ಹೆಕ್ಟೇರ್, ಬದನೆಕಾಯಿ 1.2 ಹೆಕ್ಟೇರ್, ಹೀರೆ ಬಳ್ಳಿ 1.28 ಹೆಕ್ಟೇರ್, ಬೀನ್ಸ್ 1.00 ಹೆಕ್ಟೇರ್ ವಿರ್ಸೀರ್ಣದ ಬೆಳೆಯು ಹಾನಿಯಾಗಿದೆ. ಉಳಿದಂತೆ ಎಲೆಕೋಸು, ಹೂಕೋಸು, ಚೆಂಡು ಹೂಗಳಿಗೆ ಅಲ್ಪ ಪ್ರಮಾಣದ ಹಾನಿಯಾಗಿದೆ ಎಂದು ಮಾಹಿತಿ ನೀಡಿದರು.
ಒಟ್ಟಾರೆ ಹೊಸಕೋಟೆ ತಾಲ್ಲೂಕಿನಲ್ಲಿ 17 ಹೆಕ್ಟೇರ್ ಹಾಗೂ ದೊಡ್ಡಬಳ್ಳಾಪುರ ತಾಲೂಕಿನಲ್ಲಿ 6.10 ಹೆಕ್ಟೇರ್ ಒಟ್ಟು 23.10 ಹೆಕ್ಟೇರ್ ಬೆಳೆ ಹಾನಿಯಾಗಿದೆ ಎಂದು ತೋಟಗಾರಿಕೆ ಇಲಾಖೆ ಉಪ ನಿರ್ದೇಶಕರು ಸಭೆಗೆ ತಿಳಿಸಿದರು. ಅಕಾಲಿಕ ಮಳೆ, ಗಾಳಿಯಿಂದ 30.03 ಹೆಕ್ಟೇರ್ ವಿಸ್ತೀರ್ಣದ ಕೃಷಿ ಬೆಳೆ ಹಾಗೂ ತೋಟಗಾರಿಕೆ ಬೆಳೆ ನಾಶವಾಗಿದೆ. ಶೀಘ್ರವೇ ಬೆಳೆ ಪರಿಹಾರ ನೀಡಲು ಕ್ರಮ ಕೈಗೊಳ್ಳುವಂತೆ ಸಲಹೆ ನೀಡಿದರು.
ದೊಡ್ಡಬಳ್ಳಾಪುರದಲ್ಲಿ ಒಂದು ಮನೆ ಸೇರಿದಂತೆ, ಶಾಲೆಯ ಚಾವಣಿಗೆ ಅಲ್ಪ ಹಾನಿಯಾಗಿದೆ. ಹೊಸಕೋಟೆ ವ್ಯಾಪ್ತಿಯಲ್ಲಿ ಒಂದು ಮನೆಗೆ ಹೆಚ್ಚು ಪ್ರಮಾಣದ ಹಾನಿಯಾಗಿದೆ. ಉಳಿದಂತೆ ನೆಲಮಂಗಲ ಹಾಗೂ ದೇವನಹಳ್ಳಿಯಲ್ಲಿ ಯಾವುದೇ ರೀತಿಯ ಮನೆಗಳಿಗೆ, ಶಾಲೆಗಳಿಗೆ, ಅಂಗನವಾಡಿ ಕಟ್ಟಡಗಳಿಗೆ ಹಾನಿಯಾಗಿರುವುದಿಲ್ಲ ಎಂದು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದರು. ಇದಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಅವರು ಮಾತನಾಡಿ, ಹಾನಿಯಾದ ಮನೆ ಕಟ್ಟಡಗಳಿಗೆ ಶೀಘ್ರ ಪರಿಹಾರ ಹಾಗೂ ದುರಸ್ತಿ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.
ಹೆಚ್ಚು ಮಳೆ ಮತ್ತು ಗಾಳಿಯಿಂದ ನೆಲಮಂಗಲ ವ್ಯಾಪ್ತಿ 41 ವಿದ್ಯುತ್ ಕಂಬಗಳು, 32 ಟ್ರಾನ್ಸಫಾರ್ಮರ್ಗಳು, ದೊಡ್ಡಬಳ್ಳಾಪುರ ವ್ಯಾಪ್ತಿ 22 ವಿದ್ಯುತ್ ಕಂಬಗಳು, 26 ಟ್ರಾನ್ಸಫಾರ್ಮರ್ಗಳು, ಹೊಸಕೋಟೆ ವ್ಯಾಪ್ತಿಯಲ್ಲಿ 27 ವಿದ್ಯುತ್ ಕಂಬಗಳು, 03 ಟ್ರಾನ್ಸಫಾರ್ಮರ್ಸ್ ದೇವನಹಳ್ಳಿಯಲ್ಲಿ 25 ವಿದ್ಯುತ್ ಕಂಬಗಳು, 02 ಟ್ರಾನ್ಸಫಾರ್ಮ್ಗಳಿಗೆ ಸೇರಿದಂತೆ ಒಟ್ಟು 115 ವಿದ್ಯುತ್ ಕಂಬಗಳು ಹಾಗೂ 63 ಟ್ರಾನ್ಸಫಾರ್ಮರ್ಸ್ ಹಾನಿಗೊಳಗಾಗಿರುವ ಬಗ್ಗೆ ಬೆಸ್ಕಾಂ ಅಧಿಕಾರಿಗಳು ಸಭೆಗೆ ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳು ಪ್ರತಿಕ್ರಿಯೆಸಿ, ನೆಲಕ್ಕೆ ಉರುಳಿರುವ ಕಂಬಗಳನ್ನು, ಟ್ರಾನ್ಸಫಾರ್ಮರ್ ಗಳನ್ನು ಬದಲಾಯಿಸಿ ವಿದ್ಯುತ್ ವ್ಯತ್ಯಯವಾಗದಂತೆ ಶೀಘ್ರ ಕ್ರಮ ಕೈಗೊಳ್ಳಬೇಕೆಂದು ಸೂಚಿಸಿದರು.
ಇದನ್ನೂಓದಿ:ಮುಂಗಾರು ಪೂರ್ವ ಮಳೆಗೆ ಕುಂದಾನಗರಿ ಜನ ತತ್ತರ: ಧಾರಾಕಾರ ಮಳೆಗೆ ಧರೆಗುರುಳಿದ ಮರ, ವಿದ್ಯುತ್ ಕಂಬಗಳು