ದೊಡ್ಡಬಳ್ಳಾಪುರ : ಕೊರೊನಾ ಒಂದು ಮೆಡಿಕಲ್ ಮಾಫಿಯಾ ಎಂದು ಇತ್ತೀಚೆಗೆ ಹಿರಿಯ ಪತ್ರಕರ್ತರ, ಪ್ರಗತಿಪರ ಚಿಂತಕ ಅಗ್ನಿ ಶ್ರೀಧರ್ ಹೇಳಿದ್ದರು. ಇದೀಗ ಖ್ಯಾತ ವೈದ್ಯ ಡಾ. ಟಿ ಹೆಚ್ ಆಂಜನಪ್ಪ ಸಹ ಕೊರೊನಾ ಒಂದು ಮೆಡಿಕಲ್ ಮಾಫಿಯಾ ಎಂದು ಹೇಳಿದ್ದಾರೆ.
ದೊಡ್ಡಬಳ್ಳಾಪುರ ತಾಲೂಕಿನ ದೊಡ್ಡತುಮಕೂರು ಕೆರೆ ಸಂರಕ್ಷಣೆ ಮಾಡುವ ವಿಚಾರಕ್ಕೆ ಸೇರಿದ ಸಭೆಯಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಕೊರೊನಾ ಒಂದು ಮೆಡಿಕಲ್ ಮಾಫಿಯಾ ಎಂದ ಅಗ್ನಿ ಶ್ರೀಧರ್ ಹೇಳಿಕೆಗೆ ಸಮ್ಮತಿಸಿ ಮಾತನಾಡಿದರು. ಎರಡು ವರ್ಷಗಳಿಂದ ನಾನು ಹೇಳುತ್ತಲೇ ಬಂದಿದ್ದೇನೆ.
ಇದೊಂದು ಗೊಣ್ಣೆ ಸುರಿಸುವ ವೈರಸ್ ಅಷ್ಟೇ.. ಇದು ಮರಣ ಮೃದಂಗ ಬಾರಿಸುವ ವೈರಸ್ ಅಲ್ಲ. 2ನೇ ಅಲೆಯಲ್ಲಿ ಜನ ಸಾಯಲು ಕಾರಣವಾಗಿದ್ದು ಆಕ್ಸಿಜನ್ ಮತ್ತು ಬೆಡ್ ಸಿಗದಿದ್ದ ಕಾರಣಕ್ಕೆ, ಜನರ ಸಾವಿಗೆ ವೈರಸ್ ಒಂದು ನೆಪವಾಗಿದೆಯಷ್ಟೇ ಎಂದಿದ್ದಾರೆ.
ಒಂದು ವರ್ಷದಲ್ಲಿ 4.5 ಲಕ್ಷ ಜನ ಟಿಬಿ ಕಾಯಿಲೆಯಿಂದ ಸಾವಿಗೀಡಾಗುತ್ತಿದ್ದಾರೆ. ಆದರೆ, ಕೋವಿಡ್-19 ವೈರಸ್ನಿಂದ ಕೇವಲ ನೂರರಲ್ಲಿ ಒಬ್ಬರು ಸಾಯುತ್ತಿದ್ದಾರೆ.
ಜನರ ಬದುಕನ್ನ ಬೀದಿಗೆ ತಂದು ಸಮಾಜವನ್ನ ಅಸ್ತವ್ಯಸ್ದ ಮಾಡಿದ್ದಾರೆ. ಆದ್ದರಿಂದ ನಾನು ಬೋಲ್ಡ್ ಆಗಿ ಮತ್ತು ವೈಜ್ಞಾನಿಕವಾಗಿ ಹೇಳುವೆ, ಕೊರೊನಾ ಅನ್ನೋದು ಒಂದು ಮೆಡಿಕಲ್ ಮಾಫಿಯಾ ಎಂದು.
ಇದನ್ನೂ ಓದಿ: ಮಕ್ಕಳಲ್ಲಿ ಕೊರೊನಾ ಹೆಚ್ಚಳ: ಒಂದು ವಾರ ಶಾಲೆಗೆ ರಜೆ ಘೋಷಿಸಲು ವಿಜಯಪುರ ಡಿಸಿ ನಿರ್ಧಾರ
ನಾನು ಚೈನಾದ ಊಹಾನ್ಗೆ ಭೇಟಿ ನೀಡಿ ಬಂದಿರುವೆ, ದೇಶದ ಆರ್ಥಿಕತೆಯನ್ನ ಮುಳುಗಿಸುವ ಕಾರಣಕ್ಕೆ ಕೊರೊನಾ ವೈರಸ್ ಗುಮ್ಮವನ್ನು ಬಿಡಲಾಗಿದೆ. ಗುಮ್ಮ ಬಂತೆಂದು ನಮ್ಮನ್ನು ಹೆದರಿಸುತ್ತಿದ್ದಾರೆ.
ಇದು ಗೂಬೆ ಕೂರಿಸುವ ಕೆಲಸವಾಗಿದೆ. ಹಾಗಾಗಿ, ನಾವೆಲ್ಲ ಹೆದರದೆ ಬಾಗಿಲ ಮೇಲೆ ನಾಳೆ ಬಾ ಎಂದು ಬರೆದು ನೆಮ್ಮದಿಯಾಗಿ ಜೀವನ ಮಾಡೋಣ. ಆದರೆ, ಕೊರೊನಾ ಬಗ್ಗೆಯೂ ಸ್ವಲ್ಪ ಎಚ್ಚರಿಕೆ ಸಹ ಇರಲಿ ಎಂದಿದ್ದಾರೆ.