ಹೊಸಕೋಟೆ/ಬೆಂಗಳೂರು ಗ್ರಾಮಾಂತರ : ಹೊಸಕೋಟೆಯ ಮಳೆಹಾನಿ ಪ್ರದೇಶಕ್ಕೆ(Rain affected places) ಸಿಎಂ ಬಸವರಾಜ ಬೊಮ್ಮಾಯಿ(cm Basavaraja Bommai) ಭೇಟಿ ನೀಡಿ ಪರಿಶೀಲಿಸಿದರು. ಮನೆ ಹಾನಿಗೊಳಗಾದವರಿಗೆ ಮನೆ ಕಟ್ಟಿಸಿಕೊಡುವ ಭರವಸೆಯನ್ನ ಇದೇ ವೇಳೆ ನೀಡಿದ್ದಾರೆ.
ಕಳೆದ ಒಂದು ವಾರದಿಂದ ಸುರಿಯುತ್ತಿರುವ ಮಹಾ ಮಳೆಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆಯ ವರದಪುರ ಗ್ರಾಮದ(Varadapura village) ಅಗಸನ ಕೆರೆ ತುಂಬಿ ತಗ್ಗು ಪ್ರದೇಶಗಳತ್ತ ನೀರು ಬಂದು ಸುಮಾರು 80 ಮನೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಸಿದೆ.
![CM visits rain affected areas in hoskote](https://etvbharatimages.akamaized.net/etvbharat/prod-images/kn-bng-01-cmbommayivisithoskote-vis-ka10002_22112021152617_2211f_1637574977_371.jpg)
ವರದಪುರ ಗ್ರಾಮದಲ್ಲಿ ಎಲ್ಲಾ ಕೂಲಿ ಕಾರ್ಮಿಕರು ವಾಸವಾಗಿದ್ದಾರೆ. ಕೆರೆ ನೀರು ಮನೆಗಳಿಗೆ ನುಗ್ಗಿ, ಮನೆಯಲ್ಲಿರುವ ವಸ್ತುಗಳು ಸಂಪೂರ್ಣವಾಗಿ ನಾಶವಾಗಿವೆ. ಸಚಿವ ಎಂಟಿಬಿ ನಾಗರಾಜ್ ನೇತೃತ್ವದಲ್ಲಿ ಮೂರು ದಿನಗಳಿಂದ ಜನರಿಗೆ ಗಂಜಿ ಕೇಂದ್ರ ಮೂಲಕ ಊಟ ವಿತರಣೆ ಮಾಡುತ್ತಿದ್ದಾರೆ.
ಇಂದು ಮುಖ್ಯಮಂತ್ರಿಗಳು ಕೋಲಾರ ಮಳೆ ಹಾನಿ ಪ್ರದೇಶಗಳಿಗೆ ಭೇಟಿ ನೀಡುವ ಮಾರ್ಗ ಮಧ್ಯೆ ಸಚಿವ ಎಂಟಿಬಿ ನಾಗರಾಜ್ ಅವರೊಂದಿಗೆ ಹೊಸಕೋಟೆ ಪಟ್ಟಣದ ವಾರ್ಡ್ ನಂಬರ್ 19 ವರದಾಪುರಕ್ಕೂ ಭೇಟಿ ನೀಡಿ ಜನರ ಸಮಸ್ಯೆಗಳನ್ನು ಆಲಿಸಿದರು. ಹಾನಿಗೊಳಗಾದ ಪ್ರದೇಶಗಳ ಜನರಿಗೆ ಶಾಶ್ವತ ಪರಿಹಾರ ಕಲ್ಪಿಸುವ ಭರವಸೆವನ್ನ ಸಿಎಂ ಬಸವರಾಜ ಬೊಮ್ಮಾಯಿ ನೀಡಿದರು.
ನಂತರ ಮಾತನಾಡಿದ ಸಿಎಂ, ಮಳೆಯಿಂದ ಕೆರೆ ತುಂಬಿರುವ ಕಾರಣ ಕೆರೆ ಭಾಗದ ಮನೆಗಳಿಗೆ ನೀರು ನುಗ್ಗಿದೆ. ಕೆರೆ ತುಂಬಿ ನೀರು ಹೊರಗೆ ಹೋಗಲು ಕಾಲುವೆಗಳು ಇಲ್ಲದೆ ಸಮಸ್ಯೆ ಆಗಿದೆ. ರಾಜಕಾಲುವೆ ಒತ್ತುವರಿ ಆಗಿದ್ದು, ತಕ್ಷಣ ಶಾಶ್ವತ ಪರಿಹಾರ ಕೈಗೊಳ್ಳುಲು ಜಿಲ್ಲಾಧಿಕಾರಿಗಳಿಗೆ ತಿಳಿಸಲಾಗಿದೆ ಎಂದರು.
ರಾಜಕಾಲುವೆಗಳನ್ನು ಸಾಕಷ್ಟು ಜನ ಒತ್ತುವರಿ ಮಾಡಿಕೊಳ್ಳುತ್ತಿದ್ದಾರೆ. ಅದನ್ನ ತೆರವು ಮಾಡಲು ಸೂಚಿಸಲಾಗಿದೆ ಮತ್ತು ಈ ಭಾಗದ ನಿವಾಸಿಗಳಿಗೆ ನಿವೇಶನಗಳನ್ನು ನೀಡುವುದಾಗಿ ಭರವಸೆ ನೀಡಿದರು.