ನೆಲಮಂಗಲ: ಕಮರ್ಷಿಯಲ್ ಕಾರುಗಳ ಮೇಲೆ ಹೂಡಿಕೆ ಮಾಡಿಸಿಕೊಳ್ಳುತ್ತಿದ್ದ ಯೆಲ್ಲೋ ಎಕ್ಸ್‌ಪ್ರೆಸ್‌ನಲ್ಲಿ ಹಗರಣ ನಡೆದಿರುವ ದೂರು ಬಂದ ಹಿನ್ನೆಲೆಯಲ್ಲಿ ಸಿಐಡಿ ಅಧಿಕಾರಿಗಳು ಜಕ್ಕಸಂದ್ರ ರಸ್ತೆಯಲ್ಲಿರುವ ಯೆಲ್ಲೋ ಎಕ್ಸ್‌ಪ್ರೆಸ್ ಮೇಲೆ ದಾಳಿ ನಡೆಸಿದ್ದಾರೆ.
ನೆಲಮಂಗಲ ಪಟ್ಟಣದ ಜಕ್ಕಸಂದ್ರ ರಸ್ತೆಯಲ್ಲಿರುವ ಯೆಲ್ಲೋ ಎಕ್ಸ್‌ಪ್ರೆಸ್ ಸಂಸ್ಥೆ ಸಾರ್ವಜನಿಕರಿಂದ ಬಂಡವಾಳ ಹೂಡಿಕೆ ಮಾಡಿಸಿಕೊಳ್ಳುತ್ತಿತ್ತು. ಕಮರ್ಷಿಯಲ್ ಕಾರುಗಳ ಮೇಲೆ ಹಣ ಹೂಡಿಕೆ ಮಾಡಿಸಿಕೊಳ್ಳುತ್ತಿದ್ದ ಯೆಲ್ಲೋ ಎಕ್ಸ್‌ಪ್ರೆಸ್ ಕಂಪನಿ ಒಂದು ಕಾರಿಗೆ ₹2ಲಕ್ಷ ಹೂಡಿಕೆಯನ್ನ ಜನರಿಂದ ಮಾಡಿಸಿಕೊಳ್ಳುತ್ತಿತ್ತು. ಈಗಾಗಲೇ 2 ಸಾವಿರ ಜನ ಹಣ ಹೂಡಿಕೆ ಮಾಡಿದ್ದು, ಲಾಭದ ರೂಪದಲ್ಲಿ ತಿಂಗಳಿಗೆ ₹10 ಸಾವಿರ ಹಣ ನೀಡುವ ಪ್ಲಾನ್ ಯೆಲ್ಲೋ ಎಕ್ಸ್ಪ್ರೆಸ್ನದ್ದಾಗಿತ್ತು. ಆದರೆ, ಈವರೆಗೂ 200 ಕಾರುಗಳನ್ನು ಮಾತ್ರ ಯೆಲ್ಲೋ ಎಕ್ಸ್‌ಪ್ರೆಸ್ ಖರೀದಿ ಮಾಡಿತ್ತು. ಈ ಬಗ್ಗೆ ದೂರು ದಾಖಲಾಗಿದ್ದರಿಂದ ಸಿಐಡಿ ಪೊಲೀಸರು ದಾಳಿ ನಡೆಸಿದ್ದಾರೆ.
ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಸಚಿವ ಆರ್.ಅಶೋಕ್ ಬಹುಕೋಟಿ ಹಗರಣ ಎಂದು ಪ್ರಕರಣವನ್ನು ಸಿಐಡಿಗೆ ರವಾನಿಸಿದ್ದರು. ಈ ಹಿನ್ನೆಲೆ, ಸಿಐಡಿ ಡಿವೈಎಸ್ಪಿ ಧರ್ಮಪ್ಪ, ಇನ್ಸ್ಪೆಕ್ಟರ್ ಹರೀಶ್ ನೇತೃತ್ವದಲ್ಲಿ ಮತ್ತು ಜಿಲ್ಲಾ ಉಪವಿಭಾಧಿಕಾರಿ ಮಂಜುನಾಥ್ ಸಹಯೋಗದಲ್ಲಿ ದಾಳಿ ನಡೆಸಲಾಗಿದೆ. ನಿನ್ನೆ ಮುಂಜಾನೆ ದಾಳಿ ನಡೆಸಿದ್ದು, ತಡರಾತ್ರಿವರೆಗೂ ಯೆಲ್ಲೋ ಎಕ್ಸ್‌ಪ್ರೆಸ್‌ನಲ್ಲಿ ದಾಖಲೆಗಳಿಗಾಗಿ ಶೋಧ ನಡೆಸಿದ್ದಾರೆ. ಈ ವೇಳೆ ದಾಖಲಾತಿಗಳು ಹಾಗೂ ಕಂಪ್ಯೂಟರ್ ಹಾರ್ಡ್ಡಿಸ್ಕ್ಗಳನ್ನ ಸಿಐಡಿ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ.
ಇನ್ನು, ಯೆಲ್ಲೋ ಎಕ್ಸ್‌ಪ್ರೆಸ್ ಬ್ಯುಸಿನೆಸ್‌ಗೆ ತಾತ್ಕಾಲಿಕ ನಿಷೇಧ ಹೇರಲಾಗಿದ್ದು,ಹೊಸ ಹೂಡಿಕೆ ಹಾಗೂ ವ್ಯವಹಾರ ನಡೆಸದಂತೆ ಸಿಐಡಿ ಅಧಿಕಾರಿಗಳು ಸೂಚನೆ ನೀಡಿದ್ದಾರೆ.