ಆನೇಕಲ್: ಕುಡಿಯುವ ನೀರು ಕೊಡುವ ವಿಚಾರದಲ್ಲಿ ಗಂಡ-ಹೆಂಡತಿ ನಡುವಿನ ಜಗಳ ತಾರಕಕ್ಕೇರಿದ ಸಂದರ್ಭದಲ್ಲಿ ಪತ್ನಿ ಕೆಳಗೆ ಬಿದ್ದು ಸಾವನ್ನಪ್ಪಿದ ಘಟನೆ ಬೆಂಗಳೂರು ಅಂಚಿನಲ್ಲಿರುವ ಎಲೆಕ್ಟ್ರಾನಿಕ್ ಸಿಟಿಯ ಶಿಕಾರಿಪಾಳ್ಯದ ಅಕ್ಬರ್ ನಗರದಲ್ಲಿ ನಡೆದಿದೆ.
ಪಶ್ಚಿಮ ಬಂಗಾಳ ಮೂಲದ ದಂಪತಿ ಎಸ್.ಕೆ.ಅಬ್ದುಲ್ ಮತ್ತು ಅಮೀನಾ ಖಾತುಂ ನಡುವೆ ರಾತ್ರಿ ಗಲಾಟೆಯಾಗಿದೆ. ಗಂಡ ಕುಡಿಯಲು ನೀರು ಕೇಳಿದ್ದೇ ಸಮಸ್ಯೆಯಾಗಿ ಪತ್ನಿಯೊಂದಿಗೆ ಮಾತಿಗೆ ಮಾತು ಬೆಳೆದಿದೆ. ದಂಪತಿ ನಡುವಿನ ತಳ್ಳಾಟದಲ್ಲಿ ಆಯತಪ್ಪಿ ಪತ್ನಿ ಅಮೀನಾ ಖಾತಂ ಕೆಳಗೆ ಬಿದ್ದಿದ್ದಾಳೆ. 21 ವರ್ಷದ ಅಮೀನಾ ಕೆಳಗೆ ಬಿದ್ದ ರಭಸಕ್ಕೆ ಪ್ರಾಣ ಹೊರಟು ಹೋಗಿದೆ.
ಅಕ್ಬರ್ ನಗರದ ಬಾಡಿಗೆ ಮನೆಗೆ ಈ ದಂಪತಿ ಬಂದು ಒಂದು ತಿಂಗಳಾಗಿತ್ತು. ರಾತ್ರಿ ನಡೆದ ಜಗಳದಲ್ಲಿ ಕೊಲೆ ನಡೆದೇ ಹೋಗಿದೆ. ಈ ನಡುವೆ ಇವರಿಬ್ಬರ ಮುದ್ದಿನ ಮಗು ಹುಟ್ಟಿದ ದಿನ. ಇಂದೇ ತಾಯಿ ಸಾವನ್ನಪ್ಪಿರುವುದು ನಿಜಕ್ಕೂ ವಿಪರ್ಯಾಸವೇ ಸರಿ. ಈ ಕುರಿತು ಹೆಬ್ಬಗೋಡಿ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.