ನೆಲಮಂಗಲ: ತಾಲೂಕಿನಲ್ಲಿ ಒಂದೇ ವಾರದಲ್ಲಿ ಇಬ್ಬರನ್ನು ಬಲಿ ಪಡೆದಿದ್ದ ನರಭಕ್ಷಕ ಚಿರತೆಗಳು ಬೋನಿಗೆ ಬಿದ್ದಿವೆ. ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳು ಸುಮಾರು 11 ಬೋನ್ ಇರಿಸಿದ್ದರು. ಇಂದು ಬೆಳ್ಳಂಬೆಳಗ್ಗೆ ಎರಡು ಚಿರತೆಗಳು ಬೋನಿನಲ್ಲಿ ಸೆರೆಯಾಗಿವೆ.
ಸೋಮವಾರ ರಾತ್ರಿ ಎರಡು ಮರಿ ಹಾಗೂ ಇಂದು ಬೆಳಗ್ಗೆ ಎರಡು ಚಿರತೆಗಳು ಬೋನಿಗೆ ಬಿದ್ದಿರುವ ಮಾಹಿತಿಯನ್ನು ಮಾಗಡಿ ಅರಣ್ಯಾಧಿಕಾರಿಗಳು ನೀಡಿದ್ದಾರೆ. ಇನ್ನು, ಬೆಂಗಳೂರು ಹೊರವಲಯ ನೆಲಮಂಗಲ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಸೋಲೂರು ಮತ್ತು ಮಾಗಡಿ ತಾಲೂಕಿನ ಗಡಿ ಗ್ರಾಮದಲ್ಲಿ ಚಿರತೆಗಳು ಬೋನಿಗೆ ಬಿದ್ದಿವೆ.
ಒಂದು ಚಿರತೆ ಬೋಡಗನಪಾಳ್ಯ ಹಾಗೂ ಮತ್ತೊಂದು ಚಿರತೆ ಶಿರಗನಹಳ್ಳಿಯಲ್ಲಿ ಬೋನಿಗೆ ಬಿದ್ದಿವೆ. ಇನ್ನು ಚಿರತೆ ಮರಿ ದಾಸೇಗೌಡನ ಪಾಳ್ಯದಲ್ಲಿ ಪ್ರತ್ಯೇಕವಾಗಿ ಕಂಡಿದೆ. ಒಂದೇ ವಾರದಲ್ಲಿ ಮೂರು ವರ್ಷದ ಮಗು ಮತ್ತು 68 ವರ್ಷದ ವೃದ್ಧೆಯನ್ನು ಬಲಿ ಪಡೆದ ಚಿರತೆಗಳ ಚಲನವಲನದ ಮೇಲೆ ಅರಣ್ಯಾಧಿಕಾರಿಗಳು ಕಣ್ಣಿಟ್ಟಿದ್ದರು.
ದೊಡ್ಡ ಚಿರತೆ ಹಿಡಿಯಲು ಮರಿ ಚಿರತೆ ಬಳಸಿಕೊಂಡಿದ್ದಾರೆ ಎಂಬ ಮಾಹಿತಿಯೂ ಇದೆ. ಇದೀಗ ಮಾಗಡಿ ವಲಯ ಅರಣ್ಯಾಧಿಕಾರಿಗಳ ಕಾರ್ಯಾಚರಣೆಗೆ ಅಲ್ಪ ಯಶಸ್ಸು ಸಿಕ್ಕಿದೆ. ಇನ್ನು ಸೋಮವಾರ ವೃದ್ಧೆಯನ್ನು ಬಲಿ ಪಡೆದ ಚಿರತೆಯೋ ಅಥವಾ ಬೇರೆ ಚಿರತೆಯೋ ಎಂಬ ಗೊಂದಲದಲ್ಲಿ ಗ್ರಾಮಸ್ಥರಿದ್ದಾರೆ.