ಬೆಂಗಳೂರು: ಚಿಟ್ ಫಂಡ್ ಹೆಸರಿನಲ್ಲಿ 6 ಕೋಟಿ ರೂಪಾಯಿಗೂ ಹೆಚ್ಚು ಹಣ ವಂಚಿಸಿ ರಾತ್ರೋರಾತ್ರಿ ಎಸ್ಕೇಪ್ ಆಗಿದ್ದ ಆರೋಪಿಯನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಸೂಲಿಬೆಲೆ ಪೊಲೀಸರು ಬಂಧಿಸಿದ್ದಾರೆ.
ಆಂಧ್ರ ಪ್ರದೇಶದ ಮದನಪಲ್ಲಿ ಮೂಲದ ಪಾಪಣ್ಣ ಅಲಿಯಾಸ್ ರೆಡ್ಡಿ 400ಕ್ಕೂ ಹೆಚ್ಚು ಜನರಿಗೆ ಚಿಟ್ ಫಂಡ್ ಹೆಸರಿನಲ್ಲಿ ಪಂಗನಾಮ ಹಾಕಿ ಪರಾರಿಯಾಗಿದ್ದನು. ಈಗ ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ಇದನ್ನು ತಿಳಿದ ನೂರಾರು ಮಂದಿ ಪೊಲೀಸ್ ಠಾಣೆಯ ಮುಂದೆ ಜಮಾಯಿಸಿ ನ್ಯಾಯಕ್ಕಾಗಿ ಒತ್ತಾಯಿಸಿದ್ದಾರೆ.
ಪಾಪಣ್ಣ ಸೂಲಿಬೆಲೆಯಲ್ಲಿ ಚಿಟ್ ಫಂಡ್ ವ್ಯವಹಾರ ನಡೆಸುತ್ತಿದ್ದು, ಪ್ರತಿ ತಿಂಗಳು 2 ಸಾವಿರ ರೂಪಾಯಿಯಂತೆ 30 ತಿಂಗಳು ಹಣ ಕಟ್ಟಿದರೆ 10 ಸಾವಿರ ಸೇರಿಸಿ 70 ಸಾವಿರ ನೀಡುವುದಾಗಿ ಜನರಿಗೆ ಆಸೆ ಹುಟ್ಟಿಸಿದ್ದನು. ಅದರಂತೆ ಕೆಲವರಿಗೆ ಹಣ ನೀಡಿ ನಂಬಿಕೆ ಗಳಿಸಿಕೊಂಡು ಹೆಚ್ಚು ಹೆಚ್ಚು ಜನ ಚಿಟ್ ಫಂಡ್ಗೆ ಸೇರುವಂತೆ ಮನವೊಲಿಸಿದ್ದಾನೆ.
ನಂತರ ಕಳೆದ 2 ತಿಂಗಳ ಹಿಂದೆ ತನ್ನ ಕಚೇರಿಗೆ ಬೀಗ ಹಾಕಿ ರಾತ್ರೋರಾತ್ರಿ ಸುಮಾರು ನೂರಕ್ಕೂ ಹೆಚ್ಚು ಜನರ ಬಳಿ ಸಂಗ್ರಹಿಸಿದ್ದ ಹಣವನ್ನು ತೆಗೆದುಕೊಂಡು ಪರಾರಿಯಾಗಿದ್ದಾನೆ. ಆರರಿಂದ ಏಳು ಕೋಟಿ ರೂಪಾಯಿ ಹಣವನ್ನು ತೆಗೆದುಕೊಂಡು ಪರಾರಿಯಾಗಿದ್ದಾನೆ ಎನ್ನಲಾಗಿತ್ತು.
ಹಣ ಕಳೆದುಕೊಂಡವರು ಸೂಲಿಬೆಲೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಮದನಪಲ್ಲಿಯಲ್ಲಿ ಪೊಲೀಸರು ಆರೋಪಿ ಪಾಪಣ್ಣನನ್ನು ಬಂಧಿಸಿ, ವಿಚಾರಣೆ ನಡೆಸುತ್ತಿದ್ದಾರೆ. ತಮಗೆ ನ್ಯಾಯ ಬೇಕೆಂದು ಹಣ ಕಳೆದುಕೊಂಡಿದ್ದವರು ಒತ್ತಾಯಿಸಿದ್ದಾರೆ.
ಇದನ್ನೂ ಓದಿ: ಬೆಂಗಳೂರು : ಮತ್ತಿನಲ್ಲಿ ಯುವತಿ ಜತೆ ಯುವಕನ ಅಸಭ್ಯ ವರ್ತನೆ .. ಬಿಡ್ತಾಳಾ, ನಶೆ ಇಳಿಸಿಬಿಟ್ಟಳು..