ದೊಡ್ಡಬಳ್ಳಾಪುರ: ಗಂಡ ಹೆಂಡತಿ ಸೋಗಿನಲ್ಲಿ ಬೈಕ್ನಲ್ಲಿ ಬಂದ ಸರಗಳ್ಳರು ಬಸ್ ನಿಲ್ದಾಣದಲ್ಲಿ ಬಸ್ಗಾಗಿ ಕಾಯುತ್ತಿದ್ದ ವೃದ್ದೆಯ ಮಾಂಗಲ್ಯಸರ ಕಳವುಮಾಡಲು ಯತ್ನಿಸಿದ ವೇಳೆ ಗ್ರಾಮಸ್ಥರ ಕೈಗೆ ಸಿಕ್ಕಿಬಿದ್ದಿದ್ದು, ಗ್ರಾಮಸ್ಥರು ಕಳ್ಳಿಯನ್ನು ಥಳಿಸಿ, ಬಳಿಕ ಪೊಲೀಸರಿಗೆ ಒಪ್ಪಿಸಿರುವ ಘಟನೆ ತಾಲೂಕಿನ ಮಧುರೆ ಗ್ರಾಮದಲ್ಲಿ ನಡೆದಿದೆ.
ಮಧ್ಯಾಹ್ನ 3 ಗಂಟೆ ಸುಮಾರಿಗೆ ಹೆಸರಘಟ್ಟದ 75 ವರ್ಷದ ರಾಜಮ್ಮ ಎಂಬುವವರು ತಮ್ಮ ಊರು ಹೆಸರುಘಟ್ಟಕ್ಕೆ ಹಿಂತಿರುಗಲು ಮಧುರೆ ಗ್ರಾಮದ ಬಸ್ ನಿಲ್ದಾಣದಲ್ಲಿ ಬಸ್ಗಾಗಿ ಕಾಯುತ್ತಿದ್ದರು. ಈ ವೇಳೆ ಬೈಕಿನಲ್ಲಿ ಬಂದ ಇಬ್ಬರು ರಾಜಮ್ಮ ಅವರನ್ನು ಪರಿಚಯ ಮಾಡಿಕೊಂಡು ತಾವು ಇಬ್ಬರು ಗಂಡ ಹೆಂಡತಿ ಎಂದು ಹೇಳಿ ಅವರೊಂದಿಗೆ ಮಾತು ಬೆಳೆಸಿ, ಸಲುಗೆಯಿಂದ ವರ್ತಿಸಲು ಶುರು ಮಾಡಿದ್ದಾರೆ.
ಬಳಿಕ ರಾಜಮ್ಮರ ಕೊರಳಲ್ಲಿದ್ದ ಮಾಂಗಲ್ಯ ಸರ ಕಳ್ಳತನ ಮಾಡಲು ಯತ್ನಿಸಿದ್ದು, ಗ್ರಾಮಸ್ಥರನ್ನ ಕಂಡ ಇಬ್ಬರು ಸ್ಥಳದಿಂದ ಪರಾರಿಯಾಗಲು ಯತ್ನಿಸಿದ್ದಾರೆ. ಈ ವೇಳೆ, ಮಹಿಳೆ ಬೈಕ್ನಿಂದ ಕೆಳಗೆ ಬಿದ್ದಿದ್ದಾಳೆ, ಇನ್ನು ಬೈಕ್ ಸವಾರ ಸ್ಥಳದಿಂದ ಪರಾರಿಯಾಗಿದ್ದಾನೆ. ಮಹಿಳೆಯನ್ನು ಗ್ರಾಮಸ್ಥರು ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ.
ಇನ್ನು ಆರೋಪಿ ಮಹಿಳೆಯ ಹೆಸರು ನಂದಿನಿ ಎಂದು ತಿಳಿದು ಬಂದಿದ್ದು, ಪರಾರಿಯಾದ ಬೈಕ್ ಸವಾರನ ಹೆಸರು ಧರ್ಮ ಎಂದು ತಿಳಿದು ಬಂದಿದೆ. ಮೂಲತಃ ಮಂಡ್ಯ ಮೂಲದವರಾದ ಆರೋಪಿತರು ಚಿಕ್ಕಬೆಳವಂಗಲ ಕ್ರಾಸ್ನಲ್ಲಿ ಬಾಡಿಗೆ ಮನೆಯಲ್ಲಿ ಕಳೆದ 15 ದಿನಗಳಿಂದ ವಾಸವಾಗಿದ್ದರು ಎಂದು ತಿಳಿದು ಬಂದಿದೆ. ಆರೋಪಿತ ಮಹಿಳೆಯನ್ನು ದೊಡ್ಡಬೆಳವಂಗಲ ಪೊಲೀಸರ ವಶಕ್ಕೆ ನೀಡಿದ್ದು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: ಕಳ್ಳನನ್ನು ರೈಲಿನ ಕಿಟಕಿ ಹೊರಗಿಂದ 15 ಕಿಮೀ ನೇತಾಡಿಸಿದ ಪ್ರಯಾಣಿಕರು..! ವಿಡಿಯೋ