ದೇವನಹಳ್ಳಿ : ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯತ್ ಕಚೇರಿ ಆವರಣದಲ್ಲಿ ಹಾಕಿರುವ ಸಿಸಿ ಕ್ಯಾಮೆರಾಗಳು ಗೋಡೆ ಕಡೆ ಮುಖ ಮಾಡಿವೆ. ಸಿಸಿ ಕ್ಯಾಮೆರಾಗಳನ್ನ ಕಚೇರಿ ಸಿಬ್ಬಂದಿ ಈ ರೀತಿ ಗೋಡೆ ಕಡೆ ತಿರುಗಿಸಿದ್ದಾರೆಂಬ ಅನುಮಾನ ಮೂಡಿದೆ.
ಜಿಲ್ಲೆಯ ಸರ್ಕಾರಿ ಕಚೇರಿಗಳು ಸೇರಿ ಜಿಲ್ಲಾಡಳಿತ ಭವನದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಿರಲಿ ಮತ್ತು ಕಚೇರಿಗೆ ಬರುವ ಸಾರ್ವಜನಿಕರ ಮೇಲೆ ನಿಗಾವಹಿಸುವುದಕ್ಕಂತಲೆ ಸಾವಿರಾರು ರೂ. ಹಣ ಖರ್ಚು ಮಾಡಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸುತ್ತಾರೆ.
ಆದರೆ, ದೇವನಹಳ್ಳಿ ತಾಲೂಕಿನ ಚಪ್ಪರಕಲ್ಲು ಬಳಿಯಿರುವ ಜಿಲ್ಲಾಡಳಿತ ಭವನದ ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ಭದ್ರತೆಗೆಂದು ಹಾಕಿರುವ ಸಿಸಿ ಕ್ಯಾಮೆರಾಗಳು ಇದ್ದೂ ಇಲ್ಲದಂತಾಗಿವೆ.
![cc-camera-facing-the-wall-at-zp-office-doubt-on-staff](https://etvbharatimages.akamaized.net/etvbharat/prod-images/kn-bng-01-cctv-av-7208821_18112020105922_1811f_1605677362_133.jpg)
![cc-camera-facing-the-wall-at-zp-office-doubt-on-staff](https://etvbharatimages.akamaized.net/etvbharat/prod-images/kn-bng-01-cctv-av-7208821_18112020105922_1811f_1605677362_916.jpg)
ಕಚೇರಿಯ ಒಳ ಮತ್ತು ಹೊರ ಭಾಗದಲ್ಲಿ ಅಳವಡಿಸಿರುವ ಕ್ಯಾಮೆರಾಗಳು ಕಚೇರಿಗೆ ಬಂದು ಹೋಗುವ ಸಾರ್ವಜನಿಕರ ಬದಲಿಗೆ ಕಚೇರಿಯ ಗೋಡೆಗಳನ್ನು ನೋಡುತ್ತಿರುವುದು, ಹಲವು ಅನುಮಾನಗಳನ್ನು ಹುಟ್ಟು ಹಾಕಿದೆ.
ಅಲ್ಲದೇ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಮತ್ತು ಉಪಾಧ್ಯಕ್ಷರ ಕೊಠಡಿಗಳ ಬಳಿಯ ಕ್ಯಾಮೆರಾಗಳು ಕೂಡ ಇದೇ ರೀತಿ ಇವೆ. ಕಚೇರಿಯ ಸಿಬ್ಬಂದಿಯೇ ಸಿಸಿಟಿವಿ ಕ್ಯಾಮೆರಾಗಳನ್ನು ತಿರುಗಿಸಿದ್ದಾರಾ.? ಎಂಬ ಅನುಮಾನ ಸಾರ್ವಜನಿಕರಲ್ಲಿ ಕಾಡ ತೊಡಗಿದೆ.
ಜತೆಗೆ ಕಚೇರಿಯ ಬಳಿ ಕ್ಯಾಮೆರಾಗಳು ಸರಿಯಿಲ್ಲ ಎಂದು ಕಿಡಿಗೇಡಿಗಳು ಏನಾದರು ಅನಾಹುತಗಳನ್ನು ಮಾಡಿದರೆ ಯಾರು ಹೊಣೆ ಎಂದು ಸಾರ್ವಜನಿಕರು ಪ್ರಶ್ನಿಸಿದ್ದು, ಜಿಲ್ಲಾಧಿಕಾರಿಗಳು ಇತ್ತ ಗಮನಹರಿಸುವಂತೆ ಒತ್ತಾಯಿಸಿದ್ದಾರೆ.