ಆನೇಕಲ್ : ಚಿಕ್ಕಮ್ಮನ ಮೇಲೆ ಅತ್ಯಾಚಾರ ವೆಸಗಿ ಕೊಲೆಗೈದ ಆರೋಪಿಯೊಬ್ಬನನ್ನು ಪೊಲೀಸರು ಹೆಡೆಮುರಿ ಕಟ್ಟಿದ ಘಟನೆ ರಾಜಧಾನಿ ಪಕ್ಕದಲ್ಲಿ ನಡೆದಿದೆ.
ಬನ್ನೇರುಘಟ್ಟ-ಜಿಗಣಿ ಮುಖ್ಯರಸ್ತೆಯ ಕರಿಯಪ್ಪನಹಳ್ಳಿ ದಿನ್ನೆ (ಗುಂಡುತೋಪು)ಯ ಕಾಲೋನಿ ನಿವಾಸಿ ಯಶೋಧ (40) ಎಂಬುವರ ಮೇಲೆ ಕುಡಿದ ಅಮಲಿನಲ್ಲಿ ಅತ್ಯಾಚಾರ ಎಸಗಿ ಕೊಲೆ ಮಾಡಿದ್ದ ವಿಜಯ್ ಎಂಬಾತನನ್ನು ಕಂಬಿ ಹಿಂದೆ ತಳ್ಳಿದ್ದಾರೆ.
ಮೃತಪಟ್ಟ ಯಶೋಧಾಳ ಅಕ್ಕನ ಮಗ ವಿಜಯ್ ಅಲಿಯಾಸ್ ಕೊತ್ತಮೀರಿ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಪೊಲೀಸರು ಸ್ಥಳ ಮಹಜರು ನಡೆಸಿ ಹೆಚ್ಚಿನ ಮಾಹಿತಿ ತಿಳಿದುಕೊಂಡಿದ್ದಾರೆ. ಗಾರೆ ಕೆಲಸ ಮಾಡುತ್ತಿದ್ದ ವಿಜಯ್ ಕಳೆದ ಸೋಮವಾರ ಮೃತ ಯಶೋಧ ಹಾಗೂ ಅಜ್ಜಿ ಚಂದ್ರಮ್ಮಳ ಜತೆ ಮದ್ಯ ಸೇವಿಸಿದ್ದ. ನಂತರ ಮೃತ ಯಶೋಧ ಅಮಲಿನಲ್ಲಿಯೇ ಮನೆಗೆ ಹೋಗಿ ಮಲಗಿದ್ದಾಳೆ. ಅಜ್ಜಿಗೆ ಎಗ್ರೈಸ್ ತರಲು ಹೇಳಿ ಯಶೋಧ ಮಲಗಿದ್ದ ಮನೆಗೆ ನುಗ್ಗಿ ಅತ್ಯಾಚಾರ ಮಾಡಿ ಕೊಲೆಗೈದಿದ್ದ.