ದೇವನಹಳ್ಳಿ: ದೆಹಲಿಯಲ್ಲಿ ರೈತರು ನಡೆಸುತ್ತಿರುವ ಪ್ರತಿಭಟನೆಗೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯನವರು ಬೆಂಬಲಿಸಿದ್ದು, ರೈತರು ನಡೆಸುತ್ತಿರುವ ಪ್ರತಿಭಟನೆ ನ್ಯಾಯಯುತವಾಗಿದೆ. ಕೇಂದ್ರ ಸರ್ಕಾರ ರೈತರ ಭಾವನೆಗಳಿಗೆ ಸ್ಪಂದಿಸಬೇಕು ಎಂದರು.
ದೇವನಹಳ್ಳಿಯ ಸಾದಹಳ್ಳಿಯ ಕ್ಲಾರ್ಕ್ ಎಕ್ಸೋಟಿಕ ರೆಸಾರ್ಟ್ನಲ್ಲಿ ನಡೆಯುತ್ತಿರುವ ಕಾಂಗ್ರೆಸ್ ಸಭೆಯಲ್ಲಿ ಭಾಗವಹಿಸಿ, ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಎಪಿಎಂಸಿ ಕಾಯ್ದೆ,ಭೂ ಸುಧಾರಣೆ ತಿದ್ದುಪಡಿ ಮತ್ತು ಕಾರ್ಮಿಕ ಕಾಯ್ದೆಗಳು ಜನ ವಿರೋಧಿಯಾಗಿವೆ. ಜಿಜೆಪಿಯವರು ಕೃಷಿಕರಿಗೆ ಮಾರಕವಾಗುವಂಥಹ ಕಾನೂನು ಜಾರಿಗೆ ತಂದಿದ್ದಾರೆ.ಕೃಷಿ ಚಟುವಟಿಕೆಗಳಿಗೆ ಪೂರಕವಾಗುವಂಥ ಕಾನೂನುಗಳಲ್ಲ, ರೈತರ ಹೋರಾಟ ನ್ಯಾಯಯುತವಾಗಿದ್ದು, ಜನಪರವಾದ ಯಾವುದೇ ಸರ್ಕಾರ ಜನರ ಭಾವನೆಗಳಿಗೆ ಸ್ಪಂದಿಸಬೇಕು ಎಂದರು.
ರೈತ ವಿರೋಧಿ ಕಾನೂನುನುಗಳನ್ನು ಕೇಂದ್ರ ಸರ್ಕಾರ ಕೈಬಿಡಬೇಕು. ರೈತರ ಜೊತೆ ಕೂತು ಚರ್ಚಿಸಿ, ರೈತರ ಕಾಯ್ದೆಗಳ ವಿರುದ್ಧ ಯಾಕೆ ಪ್ರತಿಭಟನೆ ಮಾಡುತ್ತಿದ್ದಾರೆ ಎನ್ನುವುದನ್ನು ತಿಳಿದುಕೊಂಡು ಅವರ ಹೋರಾಟಕ್ಕೆ ಸ್ಪಂದಿಸಬೇಕು. ಅವರ ಪ್ರತಿಭಟನೆಗೆ ನನ್ನ ಮತ್ತು ಪಕ್ಷ ಸಂಪೂರ್ಣ ಬೆಂಬಲ ಇದೆ. ಕರ್ನಾಟಕದಲ್ಲಿ ತರಲು ಹೊರಟಿರುವ ಭೂ ತಿದ್ದುಪಡಿ ಕಾಯ್ದೆ, ಎಪಿಎಂಸಿ ಕಾಯ್ದೆ, ಕಾರ್ಮಿಕ ತಿದ್ದುಪಡಿ ಕಾಯ್ದೆಯನ್ನು ಕೂಡ ತೀವ್ರವಾಗಿ ವಿರೋಧ ಮಾಡುತ್ತೇವೆ. ನಾನು ಮತ್ತು ನಮ್ಮ ಪಕ್ಷ ರೈತರ ಜೊತೆಗೆ ನಿಲ್ಲುತ್ತೇವೆ ಎಂದರು.