ನೆಲಮಂಗಲ: ಬಿಲ್ಲಿನಕೋಟೆ ವ್ಯವಸಾಯ ಸೇವಾ ಸಹಕಾರ ಸಂಘದ 2018-19 ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ ಆಡಳಿತ ಮಂಡಳಿ ಹಾಗೂ ನಿವೃತ್ತ ನಿರ್ದೇಶಕರ ಮಧ್ಯೆ ಆರೋಪ-ಪ್ರತ್ಯಾರೋಪದೊಂದಿಗೆ ಮುಕ್ತಾಯಗೊಂಡಿದೆ.
ನೆಲಮಂಗಲ ತಾಲೂಕಿನ ರಾಷ್ಟ್ರೀಯ ಹೆದ್ದಾರಿ ನಾಲ್ಕರ ಪಕ್ಕದ ವಿ.ಎಸ್.ಎಸ್.ಎನ್. ಸಂಘದ ಕಚೇರಿ ಆವರಣದಲ್ಲಿ ಸಭೆ ಆರಂಭವಾಗುತ್ತಿದಂತೆ ಸದಸ್ಯರ ನಡುವೆ ಆರೋಪ ಪ್ರತ್ಯಾರೋಪಗಳು ಕೇಳೀಬಂದವು.
ಮಹಾಸಭೆಗೆ ಮೇಲ್ವಿಚಾರಕರು ಆಗಮಿಸಬೇಕಿತ್ತು. ಆದರೆ ಅವರ ಅನುಪಸ್ಥಿತಿಯಲ್ಲಿ ಸಭೆ ನಡೆಸುವ ಅಗತ್ಯವೇನೆಂದು ಮಾಜಿ ನಿರ್ದೇಶಕ ಕಾಸರಘಟ್ಟ ರಂಗಸ್ವಾಮಯ್ಯ ಆರೋಪ ಮಾಡಿದರು. ಬಿಲ್ಲಿನಕೋಟೆ ಸಹಕಾರಿ ಸಂಘ ರೈತರಿಗೆ ಕಿಂಚಿತ್ತು ಸಹಕಾರ ನೀಡುವುದಿಲ್ಲ. ಕಾರ್ಯನಿರ್ವಹಣಾಧಿಕಾರಿ ಕಳೆದ ಕೆಲ ವರ್ಷಗಳಲ್ಲಿ ರೈತರ ಸಾಲಮನ್ನಾ ಮಾಡಲು ಮುಂಚಿತವಾಗಿ ಚೆಕ್ಗಳನ್ನು ಪಡೆದು ಅನ್ಯಾಯ ಮಾಡುತ್ತಿದ್ದರು. ರೈತರಿಗೆ ಹಣ ನೀಡುವಾಗ, ರೈತರಿಗೆ ತಿಳಿಯದೇ ಅವರ ಬ್ಯಾಂಕ್ ಖಾತೆಯಲ್ಲಿ, ಸುಮಾರು ಶೇ. 5 ರಷ್ಟು ಹಣ ಲಪಾಟಾಯಿಸುತ್ತಿದ್ದರೆಂದಾಗ ಸಭೆಯಲ್ಲಿ ಗೊಂದಲವಾಯಿತು.
ಆರೋಪಗಳಿಗೆ ಪ್ರತಿಕ್ರಿಯೆ ನೀಡಿದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ಎಲ್.ಚಿಕ್ಕರಾಜು ಇನ್ನು ಮುಂದೆ ಯಾವ ಸಮಸ್ಯೆಯೂ ಇರುವುದಿಲ್ಲ, ಸಂಘವು 1,39,000 ರೂಪಾಯಿ ಲಾಭಗಳಿಸಿದೆ. ಅಲ್ಲದೇ ವ್ಯಾಪಾರ ಸಾಲ, ಆಭರಣ ಸಾಲ, ವೇತನದಾರರ ಸಾಲ ಮತ್ತು ವಾಹನ ಸಾಲ ನೀಡಿದ್ದೇವೆ. ವೈಯಕ್ತಿಕ ವೈಮನಸ್ಸುಗಳನ್ನು ಬಿಟ್ಟಾಗ ಮಾತ್ರ ನಾವೇಲ್ಲಾ ಅಭುವೃದ್ಧಿಯಾಗಬಹುದು ಎಂದರು.