ದೊಡ್ಡಬಳ್ಳಾಪುರ : ಜಗತ್ತಿನ ಸೌಂದರ್ಯ ಕಣ್ತುಂಬಿಕೊಳ್ಳುತ್ತಿದ್ದ ಮಹಿಳೆಯೊಬ್ಬರು ಇದಕ್ಕಿದಂತೆ ತಮ್ಮ ದೃಷ್ಟಿ ಕಳೆದುಕೊಂಡು ಬದುಕು ಇಲ್ಲಿಗೆ ಮುಗಿದೋಯ್ತು ಅಂತಾ ಮೂಲೆ ಸೇರಿದರು. ಆದರೆ, ಅವರ ಕೈ ಹಿಡಿದಿದ್ದು ಅಡುಗೆ ಮಾಡುವ ಕಲೆ. ಕಣ್ಣು ಕಾಣದಿದ್ದರೂ ಫಟಾ ಫಟ್ ಅಂತ ಅಡುಗೆ ಮಾಡುತ್ತಾರೆ. ಬಹಳ ಸುಲಭವಾಗಿ ಮತ್ತು ಕಡಿಮೆ ಪದಾರ್ಥಗಳಿಂದ ಅಡುಗೆ ಮಾಡುವುದು ಇವರ ವಿಶೇಷತೆ, ತಮ್ಮ ನಳಪಾಕದ ಕಲೆಯನ್ನು ಜನರಿಗೆ ಪರಿಚಯಿಸುವ ಉದ್ದೇಶದಿಂದ ಯೂಟ್ಯೂಬ್ನಲ್ಲಿ ವಿಡಿಯೋಗಳನ್ನ ಹಂಚಿಕೊಂಡರು, ಈ ವಿಡಿಯೋಗಳೇ ಈಗ ಸ್ವಾವಲಂಬಿ ಜೀವನದ ಜೊತೆ ಆದಾಯ ಗಳಿಕೆಗೆ ದಾರಿಯಾಗಿವೆ.
ಹೌದು, ಗೃಹಿಣಿ ಭೂಮಿಕಾ (40) ಸಂಪೂರ್ಣವಾಗಿ ತಮ್ಮ ದೃಷ್ಟಿ ಕಳೆದುಕೊಂಡಿದ್ದಾರೆ. ಆದರೆ, ಅಡುಗೆ ಮನೆಯಲ್ಲಿ ಅವರ ಚುರುಕತನ ನೋಡಿದ್ರೆ ಎಂತವರು ಸಹ ಬೇರಗಾಗುತ್ತಾರೆ, ತರಕಾರಿಗಳನ್ನ ಸ್ವಚ್ಛ ಮಾಡುವುದು, ವಿವಿಧ ಆಕಾರವಾಗಿ ಕತ್ತರಿಸುವ ಬಗೆ, ಮಸಾಲೆ ಪದಾರ್ಥಗಳನ್ನು ಗುರುತಿಸುವುದು, ವಾಸನೆ ಮತ್ತು ಗ್ರಹಿಕೆಯಲ್ಲಿ ಅಡುಗೆ ಸ್ವಾದ ಗುರುತಿಸುವುದು ಬೆರಗು ಮೂಡಿಸುತ್ತದೆ.
ಅಂದಹಾಗೆ, ಭೂಮಿಕಾ ಹುಟ್ಟಿನಿಂದಲೇ ದೃಷ್ಟಿ ಕಳೆದುಕೊಂಡವರಲ್ಲ, ಮದುವೆಯಾದ10 ವರ್ಷಗಳ ನಂತರ ಜಗತ್ತಿನ ಸೌಂದರ್ಯ ನೋಡುವ ಭಾಗ್ಯ ಕಳೆದು ಕೊಂಡಿದ್ದಾರೆ. 5 ಲಕ್ಷ ಜನರಲ್ಲಿ ಒಬ್ಬರಿಗೆ ಮಾತ್ರ ಬರುವ ಅಪರೂಪ ಕಣ್ಣಿನ ಕಾಯಿಲೆ 'ಆಪ್ಟಿಕಲ್ ನೂರೈಟಿಸ್' ಇವರ ಅಂಧತ್ವಕ್ಕೆ ಕಾರಣವಾಗಿದೆ. 2010ರಲ್ಲಿ ತಲೆನೋವಿಗಾಗಿ ಚಿಕಿತ್ಸೆ ಪಡೆಯಲು ಹೋದಾಗ ಅವರಿಗೆ ಕಣ್ಣಿನ ಸಮಸ್ಯೆ ಗೊತ್ತಾಗಿದೆ. ಚಿಕಿತ್ಸೆ ನೀಡಿದ ವೈದ್ಯರು ದೃಷ್ಟಿ ಕಳೆದುಕೊಳ್ಳುವ ಸೂಚನೆಯನ್ನು ಮೊದಲೇ ನೀಡಿದರು. ಕ್ರಮೇಣವಾಗಿ ದೃಷ್ಟಿ ದೋಷ ಕಂಡು ಬಂದಿದ್ದು 2018ರಲ್ಲಿ ಸಂಪೂರ್ಣವಾಗಿ ದೃಷ್ಟಿ ಕಳೆದುಕೊಂಡರು.
ಬದುಕಿನ ಮಧ್ಯದಲ್ಲಿ ಕಣ್ಣು ಕಳೆದುಕೊಂಡ ಭೂಮಿಕಾಗೆ ಜೀವನ ಸಾಕೇನಿಸಿತ್ತು. ಮಾನಸಿಕವಾಗಿ ಕುಗ್ಗಿ ಹೋಗಿದ್ರು. ಆದರೆ, ಇಡೀ ಕುಟುಂಬ ಅವರ ಬೆಂಬಲಕ್ಕೆ ನಿಂತಿತು. ಕೆಲಸದಲ್ಲಿ ತೊಡಗಿದಾಗ ಮಾತ್ರ ನೋವು ಮರೆತು ಖುಷಿಯಾಗಿ ಜೀವನ ಮಾಡಬಹುದು ಎಂದು ಮನವರಿಕೆಯಾಯಿತು. ಬಳಿಕ, ಕೈಹಿಡಿದ ಗಂಡ ಸುದರ್ಶನ್ ಮತ್ತು ಕುಟುಂಬಸ್ಥರ ಸಹಾಯದಿಂದ ಕೆಲಸದಲ್ಲಿ ತೊಡಗಿದ್ರು, ಅಂಧತ್ವದ ನಡುವೆಯೂ ಚಟುವಟಿಕೆಯಿಂದ ಇರುವ ಬಗ್ಗೆ ತರಬೇತಿ ಪಡೆದರು. ಇದೇ ಸಮಯದಲ್ಲಿ ಇವರಿಗೆ ಬ್ಯುಸಿನೆಸ್ ಮಾಡುವ ಬಯಕೆ ಬಂದಿದ್ದು, ಸಂಬಂಧಿಯೊಬ್ಬರು ಯೂಟ್ಯೂಬ್ನಲ್ಲಿ ಕುಕ್ಕಿಂಗ್ ಚಾನೆಲ್ ಪ್ರಾರಂಭಿಸಿ ಆದಾಯ ಗಳಿಸುತ್ತಿದ್ದರು. ಅವರ ಸಲಹೆಯಂತೆ 2018ರಲ್ಲಿ ಭೂಮಿಕಾ ಕಿಚನ್ ಚಾನೆಲ್ ಪ್ರಾರಂಭಿಸಿದರು. ಪ್ರಾರಂಭವಾದ ಎರಡೇ ತಿಂಗಳಲ್ಲಿ ಉತ್ತಮ ಫಲಿತಾಂಶ ಕೂಡ ದೊರೆಯಿತು.
ಇದನ್ನೂ ಓದಿ : 100 ಗಂಟೆಗಳ ಕಾಲ ನಿರಂತರ ಅಡುಗೆ: ಗಿನ್ನೆಸ್ ವಿಶ್ವ ದಾಖಲೆ ಬರೆದ ಹಿಲ್ಡಾ ಬಾಸಿ
ಅಡುಗೆ ಮಾಡುವುದು ಭೂಮಿಕಾ ಅವರಿಗೆ ಖುಷಿ ಕೊಡುವ ವಿಚಾರವಾಗಿತ್ತು. ಆದರೆ, ದೃಷ್ಟಿ ಕಳೆದುಕೊಂಡ ಬಳಿಕ ಅಡುಗೆ ಮಾಡುವುದು ದೊಡ್ಡ ಸವಾಲಾಗಿತ್ತು. ಕೊಳೆತು ಹೋದ ತರಕಾರಿಗಳನ್ನ ಗುರುತಿಸುವುದು, ತರಕಾರಿ ಕಟ್ ಮಾಡುವುದು, ಅಡುಗೆ ಪದಾರ್ಥಗಳನ್ನ ಗುರುತಿಸುವು ಮೊದಲಿಗೆ ಸವಾಲಿನ ಕೆಲಸವೇ ಆಗಿತ್ತು.
ಬ್ಲೈಂಡ್ ಪ್ರೆಂಡ್ ಲೀ ಕುಕ್ಕಿಂಗ್ ವಾಟ್ಸ್ಆ್ಯಪ್ ಗ್ರೂಪ್ ಸೇರಿದ ನಂತರ ದೃಷ್ಟಿ ಕಾಣದೇ ಇದ್ದರೂ ಅಡುಗೆ ಮಾಡುವ ವಿಧಾನ ಕಲಿತುಕೊಂಡರು. ಸದ್ಯಕ್ಕೆ ಭೂಮಿಕಾ ತಮ್ಮ ಯೂಟ್ಯೂಬ್ ಚಾನೆಲ್ನಲ್ಲಿ ಸಾವಿರ ಅಡುಗೆಗಳ ವಿಡಿಯೋ ಹಂಚಿಕೊಂಡಿದ್ದಾರೆ. ಲಕ್ಷಕ್ಕೆ ಸನಿಹದಲ್ಲಿರುವಷ್ಟು ಸಬ್ ಸ್ಕೈಬರ್ ಹೊಂದಿದ್ದು, ಉತ್ತಮ ಆದಾಯ ಗಳಿಸುತ್ತಿದ್ದಾರೆ, ವಿಶೇಷವಾಗಿ ಬ್ಯಾಚುಲರ್ಸ್ ಗಮನದಲ್ಲಿಟ್ಟುಕೊಂಡು ಬಹಳ ಸುಲಭವಾಗಿ ಮತ್ತು ಕಡಿಮೆ ಪದಾರ್ಥಗಳಿಂದ ರುಚಿ ರುಚಿಯಾದ ಅಡುಗೆ ಮಾಡುವುದು ಇವರ ಶೈಲಿ.
ಭೂಮಿಕಾ ಅವರ ಕೆಲಸಕ್ಕೆ ಗಂಡ ಸುದರ್ಶನ್ ಬೆನ್ನೆಲುಬಾಗಿ ನಿಂತಿದ್ದಾರೆ. ಪತ್ನಿ ಅಡುಗೆ ಮಾಡುವ ವಿಡಿಯೋ ಮಾಡುವುದು, ಎಡಿಟಿಂಗ್ ಕೆಲಸ ಅವರದ್ದೇ. ಹಾಗೆಯೇ, ಭೂಮಿಕಾಗೆ ಅತ್ತೆ ಸುಮಂಗಲ ಮತ್ತು ಮಾವ ರುಮಾಲೆ ನಾಗರಾಜ್ ಬೆಂಬಲ ಸಹ ಇದೆ.ಅಷ್ಟೇ ಅಲ್ಲದೆ, ಅಡುಗೆ ಯೂಟ್ಯೂಬ್ ಚಾನಲ್ ಆರಂಭಿಸಿದ ಭಾರತದ ಮೊದಲ ಅಂಧ ಮಹಿಳೆ ಎಂಬ ಹೆಗ್ಗಳಿಕೆ ಪಾತ್ರರಾಗಿದ್ದಾರೆ.