ಯಲಹಂಕ: ತಾಲೂಕಿನ 17 ಹಳ್ಳಿಗಳಿಂದ ಸಾವಿರಾರು ಎಕರೆ ಜಮೀನಿನ ಭೂಸ್ವಾಧೀನಕ್ಕೆ ಸರ್ಕಾರ ಅಧಿಸೂಚನೆ ಹೊರಡಿಸಿದೆ. ರೈತರ ಒಕ್ಕಲೆಬ್ಬಿಸಲು ಯತ್ನಿಸಲಾಗುತ್ತಿದೆ. ಆದರೆ ಯಾವುದೇ ಬೆದರಿಕೆಗಳಿಗೂ ನಾವು ಬಗ್ಗುವುದಿಲ್ಲ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಯಲಹಂಕ ತಾಲೂಕಿನ ರಾಮಗೊಂಡನಹಳ್ಳಿ, ಬ್ಯಾಲಕೆರೆ, ಚಿಕ್ಕಬ್ಯಾಲಕೆರೆ, ದೊಡ್ಡಬೆಟ್ಟಹಳ್ಳಿ, ಚಿಕ್ಕಬೆಟ್ಟಹಳ್ಳಿ, ಗುಣಿಅಗ್ರಹಾರ, ಮೇಡಿ ಅಗ್ರಹಾರ, ಕಸಘಟ್ಟಪುರ, ಕಾಡತಮ್ಮನಹಳ್ಳಿ ಸೇರಿದಂತೆ 17 ಹಳ್ಳಿಗಳಲ್ಲಿ ಸಾವಿರಾರು ಎಕರೆ ಭೂಸ್ವಾಧೀನಕ್ಕೆ ಅಧಿಸೂಚನೆ ಹೊರಡಿಸಲಾಗಿದೆ. ಇದಕ್ಕೆ ವಿರೋಧ ವ್ಯಕ್ತಪಡಿಸಿರುವ ರೈತರು ಫಲವತ್ತಾದ ಭೂಮಿಯನ್ನು 1894ರ ಬ್ರಿಟಿಷರ ಕಾಲದ ಕಾನೂನಿನ ಅನ್ವಯ ಕೊಡುವುದಿಲ್ಲ. ಬದಲಾಗಿ 2013ರ ಸುಪ್ರೀಂ ಕೋರ್ಟ್ ಆದೇಶದಂತೆ ನೀಡಲು ಸಿದ್ಧರಿದ್ದೇವೆ ಎಂದಿದ್ದಾರೆ.
ಆತುರಾತುರವಾಗಿ ಶುಕ್ರವಾರ ಬಿಡಿಎ ಅಧಿಕಾರಿಗಳು ಮತ್ತು ಅಧ್ಯಕ್ಷರು ಯಲಹಂಕದ ಕಾಡತಮ್ಮನಹಳ್ಳಿಯಲ್ಲಿ ಶಿವರಾಮ ಕಾರಂತ ಬಡಾವಣೆ ನಿರ್ಮಾಣ ಕಾಮಗಾರಿಯ ಗುದ್ದಲಿ ಪೂಜೆ ನಡೆಸಿದ್ದಾರೆ. ಸೂಕ್ತ ಪರಿಹಾರ ನಿಗದಿ ಮಾಡದೆ ಎಕರೆಗೆ 12 ಲಕ್ಷ ಕೊಟ್ಟರೆ ಯಾವ ಕಾರಣಕ್ಕೂ ಬಿಡಿಎಗೆ ಭೂಮಿ ಬಿಟ್ಟುಕೊಡುವುದಿಲ್ಲ. ಅಲ್ಲದೇ ಸುಪ್ರೀಂ ಕೋರ್ಟ್ ಆದೇಶವನ್ನಿಟ್ಟುಕೊಂಡು ರೈತರ ಒಕ್ಕಲೆಬ್ಬಿಸಲು ಯತ್ನಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿರುವ ರೈತರು, ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ:ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದ: ಮತ್ತೆ ಬೆಳಗಾವಿಗೆ ಬರುವುದಾಗಿ ಹೇಳಿಕೆ ಕೊಟ್ಟ ಮಹಾ ಸಚಿವ