ದೊಡ್ಡಬಳ್ಳಾಪುರ: ಬಿಬಿಎಂಪಿ ವಿರುದ್ಧ ಹುಲಿಕುಂಟೆ ಗ್ರಾಮಸ್ಥರು ನಡೆಸುತ್ತಿದ್ದ ಪ್ರತಿಭಟನೆ ಕೊನೆಗೂ ಅಂತ್ಯವಾಗಿದೆ. ಮೃತ ಯುವಕರಿಗೆ 25 ಲಕ್ಷ ರೂ ಪರಿಹಾರ ಕೊಡುವುದಾಗಿ ಬಿಬಿಎಂಪಿ ಅಧಿಕಾರಿಗಳು ಭರವಸೆ ನೀಡಿದ ನಂತರ ಶವಗಳನ್ನು ಎತ್ತಿ ಗ್ರಾಮಸ್ಥರು ಪ್ರತಿಭಟನೆ ಕೈಬಿಟ್ಟಿದ್ದಾರೆ. ರಸ್ತೆಯಿಂದ ಶವ ತೆಗೆಯದೇ 8 ತಾಸುಗಳ ಕಾಲ ನಿರಂತರ ಪ್ರತಿಭಟನೆ ನಡೆಸಲಾಗಿತ್ತು.
ದೊಡ್ಡಬಳ್ಳಾಪುರ ತಾಲೂಕಿನ ಹುಲಿಕುಂಟೆ ಗ್ರಾಮದಲ್ಲಿ ನಡೆದ ಅಪಘಾತದಲ್ಲಿ ಬಿಬಿಎಂಪಿ ಕಸದ ಲಾರಿಗೆ ಸಿಲುಕಿ ಬೈಕ್ನಲ್ಲಿದ್ದ ಇಬ್ಬರು ಯುವಕರು ಸ್ಥಳದಲ್ಲೇ ಸಾವನ್ನಪ್ಪಿದ್ದರು. ನೆಲಮಂಗಲ ತಾಲೂಕಿನ ಮರಳುಕುಂಟೆಯ ಮಾರುತಿ (26) ಮತ್ತು ಮಹೇಶ್ (28) ಮೃತರು.
ಪಾಲಿಕೆ ಕಸದ ಲಾರಿ ಚಾಲಕರು ಕುಡಿದು ಬೇಕಾಬಿಟ್ಟಿಯಾಗಿ ವಾಹನಗಳ ಚಾಲನೆ ಮಾಡುತ್ತಿದ್ದಾರೆ. ಮದ್ಯವ್ಯಸನಿ ಚಾಲಕರಿಂದ ಘಟನೆ ನಡೆದಿದೆ. ಕುಟುಂಬಕ್ಕೆ ಆಧಾರವಾಗಿದ್ದ ಯುವಕರ ಕುಟುಂಬಗಳಿಗೆ ಸೂಕ್ತ ಪರಿಹಾರ ಕೊಡುವಂತೆ ಒತ್ತಾಯಿಸಿ ಸುತ್ತಮುತ್ತಲಿನ ಗ್ರಾಮಸ್ಥರು ರಸ್ತೆಯಲ್ಲೇ ಪ್ರತಿಭಟನೆ ಕುಳಿತಿದ್ದರು.
ದೊಡ್ಡಬಳ್ಳಾಪುರ ಶಾಸಕ ಟಿ.ವೆಂಕಟರಮಣಯ್ಯ ಮತ್ತು ನೆಲಮಂಗಲ ಶಾಸಕ ಡಾ.ಶ್ರೀನಿವಾಸಮೂರ್ತಿ ಪ್ರತಿಭಟನೆಗೆ ಸಾಥ್ ನೀಡಿದ್ದರು. ಮೃತರ ಕುಟುಂಬಗಳಿಗೆ ತಲಾ 50 ಲಕ್ಷ ರೂ ಪರಿಹಾರ ನೀಡುವಂತೆ ಗ್ರಾಮಸ್ಥರು ಪಟ್ಟು ಹಿಡಿದಿದ್ದರು. ಬಿಬಿಎಂಪಿ ಅಧಿಕಾರಿಗಳು ತಲಾ 25 ಲಕ್ಷ ರೂ ಪರಿಹಾರ ಕೊಡುವುದಾಗಿ ಹೇಳಿ ಹೋಗಿದ್ದರು. ಆದರೆ ಗ್ರಾಮಸ್ಥರು 50 ಲಕ್ಷ ರೂಪಾಯಿಗೆ ಪಟ್ಟು ಹಿಡಿದು ಶವಗಳನ್ನು ರಸ್ತೆಯಿಂದ ತೆಗೆಯದೇ ಪ್ರತಿಭಟನೆ ಮುಂದುವರೆಸಿದ್ದರು.
ಇದನ್ನೂ ಓದಿ: ಬಿಬಿಎಂಪಿ ಲಾರಿಗೆ ಸಿಲುಕಿ ಇಬ್ಬರು ಯುವಕರು ಸಾವು.. ಅಪಘಾತವಾಗಿ ಗಂಟೆಗಳೇ ಕಳೆದ್ರು ರಸ್ತೆಯಲ್ಲಿದ್ದ ಮೃತದೇಹಗಳು