ಮಹದೇವಪುರ : ಬಿಬಿಎಂಪಿ ವ್ಯಾಪ್ತಿಯಲ್ಲಿ ಬರುವ ಸಾಕ್ರ, ವೈದೇಹಿ ಮತ್ತು ಕೊಲಂಬೇಷಿಯಾ ಖಾಸಗಿ ಆಸ್ಪತ್ರೆಗಳಿಗೆ ಬೆಂಗಳೂರು ನಗರ ಬಿಬಿಎಂಪಿ ನೂತನ ಕಮಿಷನರ್ ಮಂಜುನಾಥ್ ಪ್ರಸಾದ್ ಅವರು ಇಂದು ಮಧ್ಯಾಹ್ನ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಹೂಡಿ ಸಮೀಪದ ಖಾಸಗಿ ಹೋಟೆಲ್ನಲ್ಲಿ ಶನಿವಾರವಷ್ಟೇ ನಗರಾಭಿವೃದ್ಧಿ ಸಚಿವ ಹಾಗೂ ಮಹದೇವಪುರ ವಲಯದ ಕೋವಿಡ್-19 ನಿಯಂತ್ರಣ ಸಂಬಂಧ ಉಸ್ತುವಾರಿ ಬೈರತಿ ಬಸವರಾಜ್, ಅಧಿಕಾರಿಗಳು ಮತ್ತು ವಲಯ ವ್ಯಾಪ್ತಿಯಲ್ಲಿ ಬರುವ ಖಾಸಗಿ ಆಸ್ಪತ್ರೆಗಳಿಗೆ ಸಂಬಂಧಿಸಿದ ವ್ಯಕ್ತಿಗಳ ಜೊತೆ ಸಭೆ ನಡೆಸಿದ್ದರು. ಈ ಬೆನ್ನಲ್ಲೇ ನಗರ ಕಮಿಷನರ್ ಭೇಟಿ ನೀಡಿದ್ದು ಖಾಸಗಿ ಆಸ್ಪತ್ರೆಗಳಿಗೆ ಶಾಕ್ ಕೊಟ್ಟಂತಾಗಿದೆ.
ಖಾಸಗಿ ಆಸ್ಪತ್ರೆಗಳು ಶೇಕಡಾ ಅರ್ಧದಷ್ಟು ಹಾಸಿಗೆಗಳು ಸರ್ಕಾರಕ್ಕೆ ನೀಡಬೇಕು, ಸುಳ್ಳು ಮಾಹಿತಿ ನೀಡಿದರೆ ಹಾಸಿಗೆ ನೀಡಲು ನಿರಾಕರಿಸಿದರೆ ಅಂತಹವರ ಮೇಲೆ ಕ್ರಿಮಿನಲ್ ಕೇಸ್ ಹಾಕಿ ಕಠಿಣ ಕ್ರಮ ಜರುಗಿಸಲಾಗುವುದು ಎಂದು ನಗರ ಕಮಿಷನರ್ ಎಚ್ಚರಿಕೆ ನೀಡಿದರು. ಸಾಕ್ರ ಆಸ್ಪತ್ರೆಗೆ ಭೇಟಿ ಕೊಡುವ ಮುನ್ನ ಸುಳ್ಳು ಮಾಹಿತಿ ನೀಡಿದರು. ಇಲ್ಲಿ 300 ಹಾಸಿಗೆಗಳು ಇದ್ದು ಅದರಲ್ಲಿ ಸಂಜೆ ವೇಳೆಗೆ 100 ಹಾಸಿಗೆಗಳು ಸರ್ಕಾರಕ್ಕೆ ನೀಡಲು ಸಮಯ ನೀಡಲಾಗಿದೆ. ಇಲ್ಲವಾದರೆ ಕ್ರಿಮಿನಲ್ ಕೇಸು ದಾಖಲು ಮಾಡಲು ಸ್ಥಳೀಯ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು.
ವೈದೇಹಿ ಆಸ್ಪತ್ರೆಯಲ್ಲಿ ಒಂದು ಸಾವಿರ ಹಾಸಿಗೆಗಳಿದ್ದು ಅದರಲ್ಲಿ 100 ಮಾತ್ರ ನೀಡಿದ್ದಾರೆ. ಅರ್ಧದಷ್ಟು ನಮಗೆ ಕೊಡಲೇಬೇಕು ಎಂದು ಹೇಳಲಾಗಿದೆ ಎಂದರು. ಭಾನುವಾರ ಸಂಜೆಯ ವೇಳೆಗೆ ಖಾಸಗಿ ಆಸ್ಪತ್ರೆಗಳು ಸರಿಯಾದ ಮಾಹಿತಿ ನೀಡಬೇಕು ಇಲ್ಲದಿದ್ದರೆ ಅಂತಹವರಿಗೆ ನೋಟಿಸ್ ಜಾರಿ ಮಾಡಿ ಲೈಸೆನ್ಸ್ ವಾಪಸ್ ಪಡೆಯಲಾಗುತ್ತದೆ ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ.
ಇದೇ ವೇಳೆ ಮಹದೇವಪುರ ಬಿಬಿಎಂಪಿ ವಲಯದ ಕಮಾಂಡಿಂಗ್ ಸೆಂಟರ್ಗೆ ಭೇಟಿ ನೀಡಿ ಪರಿಶೀಲಿಸಿ ಸರಿಯಾದ ರೀತಿಯ ವ್ಯವಸ್ಥೆ ಕಂಡು ಹಿರಿಯ ಅಧಿಕಾರಿಗಳನ್ನು ಅಭಿನಂದಿಸಿದರು.