ದೊಡ್ಡಬಳ್ಳಾಪುರ (ಬೆಂಗಳೂರು ಗ್ರಾಮಾಂತರ) : ವ್ಯವಹಾರಕ್ಕಾಗಿ ಬ್ಯಾಂಕ್ವೊಂದರಲ್ಲಿ ಸಾಲ ಪಡೆದ ಕುಟುಂಬ ತನ್ನ ಮನೆಯನ್ನು ಅಡವಿಟ್ಟಿತ್ತು. ಕೊರೊನಾದಿಂದ ಬ್ಯಾಂಕ್ ಸಾಲ ತೀರಿಸಲು ಮನೆಯವರಿಗೆ ಸಾಧ್ಯವಾಗಿಲ್ಲ. ಸಾಲ ಜಮೆಯಾಗದ ಹಿನ್ನಲೆ ದೊಡ್ಡಬಳ್ಳಾಪುರ ಬ್ಯಾಂಕ್ ಸಿಬ್ಬಂದಿ ಮನೆಗೆ ಬೀಗ ಹಾಕಿದ್ದಾರೆ. ಬ್ಯಾಂಕ್ ಸಿಬ್ಬಂದಿಯವರ ನಿರ್ದಾಕ್ಷಿಣ್ಯ ಕ್ರಮದಿಂದ 12 ಜನರ ದೊಡ್ಡ ಕುಟುಂಬ ಬೀದಿಗೆ ಬಂದಿದೆ. ಹಸಿದ ಕಂದಮ್ಮಗಳಿಗೆ ಊಟ ಕೊಡಲಾಗದೆ, ರೋಗಿಗಳಿಗೆ ಔಷದೋಪಚಾರ ಮಾಡಲಾಗದೆ ಇಡೀ ಕುಟುಂಬ ಕಣ್ಣೀರು ಹಾಕುತ್ತಿದೆ.
ದೊಡ್ಡಬಳ್ಳಾಪುರ ನಗರದ ಡಿ ಕ್ರಾಸ್ ಬಳಿಯ ಕುಟುಂಬಸ್ಥರು ಇದೀಗ ಮನೆಯನ್ನು ಕಳೆದುಕೊಂಡಿದ್ದಾರೆ. ಮನೆಯ ಸದಸ್ಯರೆಲ್ಲರೂ ತಮ್ಮ ನಿವಾಸದ ಮುಂದೆ ಕುಳಿತು ಕಣ್ಣೀರು ಹಾಕುತ್ತಿದ್ದಾರೆ. ಬ್ಯಾಂಕ್ನಲ್ಲಿ ಮಾಡಲಾದ ಸಾಲವನ್ನು ತೀರಿಸಲಾಗದೆ ಇವತ್ತು ಇಡೀ ಕುಟುಂಬವೇ ಬೀದಿಗೆ ಬಂದಿದೆ.
ಕುಟುಂಬದ ಮುಖ್ಯಸ್ಥ ಸತೀಶ್ ಮಿಲ್ಟ್ರಿ ಹೋಟೆಲ್ ನಡೆಸುತ್ತಿದ್ದರು. ಕೊರೊನಾ ಬಂದ ನಂತರ ಮಿಲ್ಟ್ರಿ ಹೋಟೆಲ್ ವ್ಯಾಪಾರ ಬಂದ್ ಆಗಿತ್ತು. ಮಿಲ್ಟ್ರಿ ಹೋಟೆಲ್ ವ್ಯವಹಾರ ನಂಬಿ ಬೆಂಗಳೂರಿನ ಖಾಸಗಿ ಫೈನಾನ್ಸ್ನಲ್ಲಿ ಸಾಲ ಮಾಡಿದ್ದರು. ಹೋಟೆಲ್ ಬಂದ್ ಆಗಿದ್ದರಿಂದ ಸಾಲ ತೀರಿಸಲಾಗಿಲ್ಲ. ಸಾಧ್ಯವಾದ ಮಟ್ಟಿಗೆ ಸಾಲವನ್ನು ತೀರಿಸಿದ್ದಾರೆ. ಇದೀಗ ಕೋರ್ಟ್ ಆದೇಶದೊಂದಿಗೆ ಬಂದ ಬ್ಯಾಂಕ್ ಸಿಬ್ಬಂದಿ ಮನೆಗೆ ಬೀಗ ಹಾಕಿ ಸೀಜ್ ಮಾಡಿದ್ದಾರೆ.
ಔಷದೋಪಚಾರ ನೀಡಲು ಅಸಹಾಯಕರಾದ ಸ್ಥಿತಿ: 10 ದಿನ ಸಮಯ ಕೊಡಿ ಎಂದು ಕುಟುಂಬಸ್ಥರು ಅಂಗಲಾಚಿದ್ದಾರೆ. ಆದರೆ ಕೋರ್ಟ್ ಆದೇಶದಂತೆ ಬ್ಯಾಂಕ್ ಸಿಬ್ಬಂದಿ ಮನೆಗೆ ಬೀಗ ಹಾಕಿದ್ದಾರೆ. ಆಶ್ರಯ ಕಳೆದುಕೊಂಡ ಮನೆಯ ಸದಸ್ಯರಿಗೆ ಈಗ ಮನೆಯ ಮುಂಭಾಗದ ರಸ್ತೆಯೇ ಆಶ್ರಯ ತಾಣವಾಗಿದೆ. ನೀರನ್ನು ಸಹ ಪಕ್ಕದ ಮನೆಯವರನ್ನ ಕೇಳಬೇಕಾದ ಪರಿಸ್ಥಿತಿ ಬಂದಿದೆ. ಹಸಿದ ಮಕ್ಕಳಿಗೆ ಏನು ಕೊಡಬೇಕೆಂಬುದು ತಿಳಿಯದೆ ಅಸಹಾಯಕ ಸ್ಥಿತಿಯಲ್ಲಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿರುವರಿಗೆ ಔಷದೋಪಚಾರ ಮಾಡಲಾಗದ ಸಂಕಷ್ಟ ಇಡೀ ಕುಟುಂಬವನ್ನೇ ಕಣ್ಣೀರಲ್ಲಿ ಕೈತೊಳೆಯವಂತೆ ಮಾಡಿದೆ.
ಊಟ ತಿನ್ನಲೂ ಕೂಡಾ ಬಿಟ್ಟಿಲ್ಲ: ಈ ಬಗ್ಗೆ ಸತೀಶ್ ಪತ್ನಿ ಮೀನಾಕ್ಷಿ ಅವರು ಮಾತನಾಡಿದ್ದು, ನಾವು ಚಿಕ್ಕ ಚಿಕ್ಕ ಮಕ್ಕಳನ್ನು ಹೊಂದಿದ್ದೇವೆ. ಬ್ಯಾಂಕ್ ಸಿಬ್ಬಂದಿ, ಪೊಲೀಸರು ಎಷ್ಟೇ ಹೇಳಿದ್ರು ಕೂಡಾ ಕೇಳುತ್ತಿಲ್ಲ. ಸ್ವಲ್ಪ ಪ್ರಾಬ್ಲಂ ಆಗಿತ್ತು. ನಮ್ಮ ಯಜಮಾನರ ಮೇಲೆ ಕೇಸ್ ಆಗಿತ್ತು. ಅದರಿಂದ ಸಮಸ್ಯೆ ಆಗಿತ್ತು ಎಂದು ಹೇಳುತ್ತಲೇ ಇದ್ದೆವು. 10 ಸಾವಿರವನ್ನೇ ಕಟ್ಟುತ್ತಾ ಬಂದಿದ್ದೇವೆ. ಕಟ್ಟಿದ ದುಡ್ಡಿಗೂ ಬಡ್ಡಿಯನ್ನು ಕಟ್ಟಿಸಿಕೊಂಡರೆ ಹೇಗೆ ಹಣ ಕಟ್ಟಲು ಮನಸ್ಸು ಬರುತ್ತೆ?. ಒಂದು ವಾರ ಸಮಯವನ್ನು ಕೊಡಿ ಎಂದು ಕೇಳಿಕೊಂಡೆವು. ಬ್ಯಾಂಕ್ನಿಂದ 10 ಲಕ್ಷವನ್ನು ತೆಗೆದುಕೊಂಡಿದ್ದೇವೆ. ನಮ್ಮ ಪತಿ ಹೋಟೆಲ್ ನಡೆಸುವಾಗ ಕಟ್ಟಿದ್ದಾರೆ. ಸ್ವಲ್ಪ ಹಣವನ್ನು ನಮ್ಮ ಭಾವ ಕಟ್ಟಿದ್ದರು. ಈಗ ಕೇಳಿದ್ರೆ ಅವರು ನೀವು ಕಟ್ಟಿಲ್ಲ ಎನ್ನುತ್ತಿದ್ದಾರೆ. ಅಲ್ಲದೇ, ಸ್ಲಿಪ್ ಕೇಳಿದ್ರೆ ಅದನ್ನೂ ಕೂಡಾ ಅವರು ಕೊಡುತ್ತಿಲ್ಲ. ಅಲ್ಲದೇ ಇವತ್ತು ಬಂದು ಮನೆ ಸೀಜ್ ಮಾಡಿಕೊಂಡು ಹೋಗಿದ್ದಾರೆ. ನಮಗೆ ಊಟ ತಿನ್ನಲೂ ಕೂಡಾ ಬಿಟ್ಟಿಲ್ಲ ಎಂದು ಆರೋಪಿಸಿದ್ದಾರೆ.
ಇದನ್ನೂ ಓದಿ : ಬ್ಯಾಂಕ್ನಲ್ಲಿ ನಕಲಿ ಚಿನ್ನ ಅಡಮಾನ ಇಟ್ಟು ವಂಚನೆ: ಮೂವರ ಗ್ಯಾಂಗ್ ವಶಕ್ಕೆ