ನೆಲಮಂಗಲ : ಮದ್ಯದ ಅಮಲಿನಲ್ಲಿ ಹಣದ ಮಧ್ಯಸ್ಥಿಕೆಗೆ ಬಂದಿದ್ದ ಸ್ನೇಹತನೋರ್ವ ಮಾಲೀಕನಿಂದ ಕೊಲೆಯಾದ ಘಟನೆ ನೆಲಮಂಗಲ ತಾಲೂಕಿನ ಮೈಲನಹಳ್ಳಿ ಸಮೀಪದ ಸಾಯಿ ಲೇಔಟ್ ನಲ್ಲಿ ನಡೆದಿದೆ.
ತುಮಕೂರು ಜಿಲ್ಲೆ ಕೊರಟಗೆರೆ ಮೂಲದ ಸತೀಶ್ (26) ಕೊಲೆಯಾದ ದುರ್ದೈವಿ. ಈತನ ಸ್ನೇಹಿತ ಪ್ರದೀಪ್ ಎಂಬಾತನು ಮಿನಿ ಬಸ್ ಚಾಲಕನಾಗಿ ಕೆಲಸ ಮಾಡುತ್ತಿದ್ದ. ಪ್ರದೀಪ್ನ ಮಾಲೀಕನಾದ ಹರೀಶ್ ಮುಂಗಡ ಹಣ ನೀಡಿ, 5 ತಿಂಗಳಿನಿಂದ ಕೆಲಸ ಮಾಡಿಸಿಕೊಂಡಿದ್ದನು. ಯಾವುದೇ ಸಂಬಳ ಕೊಟ್ಟಿರಲಿಲ್ಲ.
ಇದೇ ಸಂಬಳ ವಿಚಾರಕ್ಕೆ ಮಾಲೀಕ ಹರೀಶ್ ಮತ್ತು ಚಾಲಕ ಪ್ರದೀಪ್ ನಡುವೆ ಮನಸ್ತಾಪವಿತ್ತು. ನಂತರ ಸಂಬಳ ಕೊಡುವುದಾಗಿ ಮಾಲೀಕ ಹರೀಶ್ ಪ್ರದೀಪ್ನಿಗೆ ಕರೆದಿದ್ದ. ಈ ವ್ಯವಹಾರದ ಮಧ್ಯವರ್ತಿಯಾಗಿ ಕೊಲೆಯಾದ ಸತೀಶ್ ತೆರಳಿದ್ದ ಎನ್ನಲಾಗಿದೆ. ತಡರಾತ್ರಿ ಎಲ್ಲರೂ ಸೇರಿ ಪಾರ್ಟಿ ಮಾಡಿದ್ದಾರೆ. ನಂತರ ಸಂಬಳ ವಿಚಾರಕ್ಕೆ ಮತ್ತೆ ಜಗಳ ಆರಂಭವಾಗಿದೆ. ಮಧ್ಯವರ್ತಿಯಾಗಿ ಬಂದಿದ್ದ ಸತೀಶ್ನ ಮೇಲೆ ಮಾಲೀಕ ಹರೀಶ್ ಮತ್ತು ಅವನ ಸಹಚರರಾದ ಸಿದ್ದು, ಮಲ್ಲೇಶ್ ಎಂಬುವರು ಬಿಯರ್ ಬಾಟಲ್ ನಿಂದ ಹಲ್ಲೆ ನಡೆಸಿದ್ದಾರೆ.
ಇದರಿಂದ ತೀವ್ರವಾಗಿ ಗಾಯಗೊಂಡಿದ್ದ ಸತೀಶ್ ನ ನೆಲಮಂಗಲ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ, ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಕಳುಹಿಸಲಾಗಿದೆ. ಆದರೆ, ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಹಾಸಿಗೆ ಸಿಗದೇ ಮತ್ತೆ ನೆಲಮಂಗಲದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಚಿಕಿತ್ಸೆ ಫಲಕಾರಿಯಾಗದೇ ಸತೀಶ್ ಮೃತಪಟ್ಟಿದ್ದಾನೆ. ಈ ಸಂಬಂಧ ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.