ಬೆಂಗಳೂರು: ಕನ್ನಡಿಗ ರವಿಕುಮಾರ್ ಕೆ ವೆಂಕಟೇಶ್ ಇಂಗ್ಲೆಂಡ್‌ನ ಪ್ಯಾರಿಸ್ ಕೌನ್ಸಿಲ್ ಸಭೆಗೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಮೂಲತಃ ಬೆಂಗಳೂರು ಹೊರವಲಯ ನೆಲಮಂಗಲ ಸಮೀಪದ ಕುದುರೆಗೆರೆ ಗ್ರಾಮದ ನಿವಾಸಿಯಾದ ರವಿಕುಮಾರ್ ಕೆ ವೆಂಕಟೇಶ್, ರಮಾದೇವಿ ವೆಂಕಟೇಶ್ ಪುತ್ರರಾಗಿ ಬಿಬಿಎಂ ಎಂಬಿಎ ಪದವಿ ಪಡೆದಿದ್ದು, ಇಂಗ್ಲೆಂಡ್‌ನಲ್ಲಿ ಪ್ರಿನ್ಸಿಪಾಲ್ ಕನ್ಸಲ್ಟೆಂಟ್(ಐಟಿ) ಆಗಿ ಕೆಲಸ ನಿರ್ವಹಿಸುತ್ತಿದ್ದಾರೆ.
ಕನ್ನಡ ವಿಷಯಗಳು ಡಿಜಿಟಲ್ ಆಗಲು ಹತ್ತು ವರ್ಷಗಳ ಹಿಂದೆ, ನೋಡು ಮಗ ಡಾಟ್ ಕಾಂ ವೆಬ್ ಜಾಲತಾಣವನ್ನು ಆರಂಭಿಸಿ, ವಿಶ್ವದೆಲ್ಲೆಡೆ ಕನ್ನಡದ ಕಂಪು ಹರಡಲು ಸಹಾಯಕರಾಗಿದ್ದಾರೆ. ಯುಕೆಯಲ್ಲಿ ಕನ್ನಡಿಗರನ್ನು ಒಗ್ಗೂಡಿಸಿ ಹೆಚ್ಚು ಹೆಚ್ಚು ಕನ್ನಡ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಕನ್ನಡದ ಮೇಲಿನ ಅಭಿಮಾನವನ್ನು ತೋರಿದ್ದಾರೆ.
ಶಿಕ್ಷಣದಿಂದ ಮಾತ್ರ ಅಭಿವೃದ್ಧಿ ಸಾಧ್ಯ ಎಂದು ನಂಭಿರುವ ವೆಂಕಟೇಶ್, ಗ್ರಾಮೀಣ ಭಾಗದಲ್ಲಿ ಅಂತರಾಷ್ಟ್ರೀಯ ಮಟ್ಟದ ಶಿಕ್ಷಣ ಸಿಗಬೇಕೆಂಬ ಉದ್ದೇಶದಿಂದ ನೆಲಮಂಗಲ ತಾಲೂಕಿನ ಕಂಬಾಳು ಗ್ರಾಮದಲ್ಲಿ ಪ್ರಜ್ಞ ಜನ್ಯ ಇಂಟರ್‌ನ್ಯಾಷನಲ್ ಶಾಲೆಯನ್ನು ಆರಂಭಿಸಿದ್ದಾರೆ.
ಸಮಾಜ ಸೇವೆಯಲ್ಲಿ ಸಕ್ರಿಯರಾಗಿ ಅಲ್ಲಿನ ಸ್ಥಳೀಯರ ಮೆಚ್ಚುಗೆ ಪಡೆದುಕೊಂಡಿದ್ದಾರೆ. ಯುಕೆಯ ಲೇಬರ್ ಪಾರ್ಟಿಯ ನಾರ್ಥ್ ಸ್ವೀಡನ್ ಎಂಪಿ ಕ್ಷೇತ್ರದ ಮುಖಂಡರಾಗಿ, ಅದೇ ಕ್ಷೇತ್ರದ ಸಂಚಾಲಕರಾಗಿದ್ದು ಕೌನ್ಸಿಲರ್ ಆಗಲು ನೆರವಾಗಿದೆ.
2006ರಿಂದ ಇಂಗ್ಲೆಂಡ್‌ನಲ್ಲಿ ಕಾಯಂ ನೆಲೆಸಿರುವ ರವಿಕುಮಾರ್‌ಗೆ ಅಲ್ಲಿನ ಪೌರತ್ವ ಪಡೆಯಲು ಎಲ್ಲಾ ಅರ್ಹತೆಗಳಿದ್ದರು, ಅದನ್ನೂ ನಿರಾಕರಿಸಿ ಭಾರತದ ಪೌರರಾಗಲು ಇಚ್ಚಿಸಿ ದೇಶಪ್ರೇಮ ಮೆರೆದಿದ್ದಾರೆ.
ಕೌನ್ಸಿಲರ್ ಆಗಿ ಈ ಭಾಗದ ಅಭಿವೃಧ್ಧಿ ಕಾರ್ಯಗಳನ್ನು ಕೈಗೊಳ್ಳುವುದರ ಜೊತೆಗೆ ಇಲ್ಲಿ ನೆಲೆಸಿರುವ ಕನ್ನಡಿಗರ ಅಭಿವೃದ್ಧಿಗೆ ಶ್ರಮಿಸುವೆ ಎಂದಿದ್ದಾರೆ.