ಹೊಸಕೋಟೆ: ಜಿದ್ದಾಜಿದ್ದಿ ಕಣವಾಗಿರುವ ಹೊಸಕೋಟೆ ಕ್ಷೇತ್ರದ ಖಾಜಿ ಹೊಸಹಳ್ಳಿಯಲ್ಲಿ ಎರಡು ಗುಂಪುಗಳ ನಡುವೆ ಕಳೆದ ರಾತ್ರಿ ಮಾರಾಮಾರಿ ನಡೆದಿದೆ.
ಘಟನೆಯಲ್ಲಿ ಗ್ರಾಮದ ಬಿಜೆಪಿ ಕಾರ್ಯಕರ್ತ ಮಂಜುನಾಥ್ ಎಂಬಾತ ಗಾಯಗೊಂಡಿದ್ದು, ಆತನನ್ನು ಹೊಸಕೋಟೆ ಸರ್ಕಾರಿ ಆಸ್ವತ್ರೆಗೆ ದಾಖಲಿಸಲಾಗಿದೆ. ಪಕ್ಷೇತರ ಅಭ್ಯರ್ಥಿ ಶರತ್ ಬೆಂಬಲಿಗರು ಹಲ್ಲೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ತಿರುಮಶೆಟ್ಟಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಮಾರಾಮಾರಿ ಹಿನ್ನೆಲೆ ಗ್ರಾಮದಲ್ಲಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.
ಆಸ್ಪತ್ರೆಗೆ ಎಂಟಿಬಿ ಭೇಟಿ:
ಇನ್ನು, ಆಸ್ಪತ್ರೆಗೆ ಭೇಟಿ ನೀಡಿದ್ದ ಬಿಜೆಪಿ ಅಭ್ಯರ್ಥಿ ಎಂಟಿಬಿ ನಾಗರಾಜ್ ಅವರು ಹಲ್ಲೆಯಿಂದ ಗಾಯಗೊಂಡಿರುವ ಕಾರ್ಯಕರ್ತನ ಯೋಗಕ್ಷೇಮ ವಿಚಾರಿಸಿದರು.
ಬಳಿಕ ಮಾತನಾಡಿದ ಅವರು, ನನ್ನ ಜೊತೆ ಇದ್ದ ಕಾಂಗ್ರೆಸ್ ಕಾರ್ಯಕರ್ತರು ಈಗ ಬಿಜೆಪಿಯಲ್ಲಿ ನನ್ನ ಪರ ಪ್ರಚಾರ ಮಾಡುತ್ತಿದ್ದಾರೆ. ಆಗ ಪಕ್ಷೇತರ ಅಭ್ಯರ್ಥಿ ಶರತ್ ಬಚ್ಚೇಗೌಡರ ಏಳೆಂಟು ಜನ ಬೆಂಬಲಿಗರು ಸೇರಿ ಗಲಾಟೆ ಮಾಡಿ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿದರು.
ಇನ್ನು, ಕಳೆದ ವಾರವೇ ಗ್ರಾಮಕ್ಕೆ ನಾನು ಭೇಟಿ ನೀಡಿದ್ದ ವೇಳೆ ಪಟಾಕಿ ಹಚ್ಚುವ ವಿಷಯದಲ್ಲಿ ಗಲಾಟೆ ಮಾಡಿದ್ದರು. ಈ ಬಗ್ಗೆ ಪೊಲೀಸರಿಗೂ ಮಾಹಿತಿ ನೀಡಿದ್ದೆ. ಚುನಾವಣೆ ಸಂದರ್ಭದಲ್ಲಿ ಗಲಾಟೆ ಬೇಡ ಎಂದು ರಾಜಿ ಮಾಡಿಸಿದ್ದರು. ಗ್ರಾಮದಲ್ಲಿ ಬಿಜೆಪಿ ಪರ ಪ್ರಚಾರ ಮಾಡಬೇಡಿ ಎಂದು ಕಲ್ಲು ಮತ್ತು ರಾಡ್ ನಿಂದ ರಾತ್ರಿ ಹಲ್ಲೆ ನಡೆಸಿದ್ದಾರೆ. ಗಾಯಾಳುವಿಗೆ ತಲೆ ಹಾಗು ಕೈಗೆ ಪೆಟ್ಟು ಬಿದ್ದಿದೆ. ಬಚ್ಚೇಗೌಡರು ಕಳೆದ 30 ವರ್ಷಗಳಲ್ಲಿ ಬೆದರಿಕೆ, ಹಲ್ಲೆಯಂತಹ ಧಮ್ಕಿಯಿಂದಲೇ ರಾಜಕೀಯ ಜೀವನ ಕಳೆದಿದ್ದಾರೆ. ಈಗ ಬಚ್ಚೇಗೌಡರ ಮಗ ಶರತ್ ಹಾಗೂ ಅವರ ಕಾರ್ಯಕರ್ತರು ಈ ಸಂಸ್ಕೃತಿ ಮುಂದುವರಿಸಿದ್ದಾರೆ ಎಂದು ಎಂಟಿಬಿ ವಾಗ್ದಾಳಿ ನಡೆಸಿದರು.