ಬೆಂಗಳೂರು: ಪುಟ್ಟ ಗುಡಿಯಲ್ಲಿ ಅಕ್ಕಿಯಲ್ಲಿಟ್ಟ ಬೆಲ್ಲದಾರತಿಗಳಿಂದ ಆರತಿ ಮಾಡಿಸಿಕೊಂಡು ಭಕ್ತರ ಇಷ್ಟಾರ್ಥಗಳನ್ನು ನೆರವೇರಿಸುತ್ತಿರುವ ಈ ದೇವಿ ಹೆಸರು ಶ್ರೀ ಅಖಿಲಾಂಡ ಕೋಟಿ ಅನ್ನಪೂರ್ಣೇಶ್ವರಿ. ಅಂದಹಾಗೆ ಈ ದೇವಿ ನೆಲೆಸಿರೋದು ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲೂಕಿನ ಕೋಲಾರ ರಸ್ತೆಯ ಅತ್ತಿವಟ್ಟ ಗ್ರಾಮದಲ್ಲಿ.
ಕಳೆದ 20 ವರ್ಷಗಳ ಹಿಂದೆ ಅತ್ತಿವಟ್ಟಿ ಗ್ರಾಮದ ರಾಮಕೃಷ್ಣಚಾರಿ ಎಂಬುವರಿಗೆ ಅವರ ಜಮೀನನ್ನು ಹದ ಮಾಡುತ್ತಿರುವಾಗ ದೇವಿಯ ವಿಗ್ರಹ ಹಾಗೂ ಪೀಠ ದೊರೆತಿದ್ವು. ಇದರಿಂದ ಆಶ್ಚರ್ಯಗೊಂಡ ರಾಮಕೃಷ್ಣಚಾರಿ ಅವರಿಗೆ ದಿಕ್ಕುತೋಚದಂತಾಗಿ ದೇವಿಯ ಮೂರ್ತಿಯನ್ನು ಮನೆಯಲ್ಲೇ ಇಟ್ಟಿದ್ದರು. ತದನಂತರ ಐದು ವರ್ಷಗಳ ಹಿಂದೆ ನಾಗಸಾಧು ಒಬ್ಬರು ಅವರ ಕನಸಿನಲ್ಲಿ ಬಂದು ನಿಮ್ಮ ಭೂಮಿಯಲ್ಲಿ ದೇವಿಗೆ ಒಂದು ದೇವಾಲಯವನ್ನು ಕಟ್ಟಿ ಪೂಜಿಸುವುದರಿಂದ ಎಲ್ಲರಿಗು ಒಳಿತಾಗುತ್ತದೆ ಎಂದು ತಿಳಿಸಿದ್ರಂತೆ. ಹಾಗಾಗಿ ದೇವಿಗೆ ಅತ್ತಿವಟ್ಟ ಗ್ರಾಮದ ಹೊರಭಾಗದಲ್ಲಿರುವ ರಾಮಕೃಷ್ಣಚಾರಿ ಜಮೀನಿನಲ್ಲಿ ಒಂದು ಪುಟ್ಟ ಗುಡಿಯನ್ನು ನಿರ್ಮಿಸಿ ಪೂಜಿಸಿಕೊಂಡು ಬರಲಾಗುತ್ತಿದೆ.
ಆರೋಗ್ಯ, ಮದುವೆ, ಸಂತಾನ ಇತ್ಯಾದಿ ಸಮಸ್ಯೆಗಳಿಗೆ ಪರಿಹಾರ ಹುಡುಕಿಕೊಂಡು ಬರುವ ಭಕ್ತರ ಇಷ್ಟಾರ್ಥಗಳನ್ನು ದೇವಿ ನೆರೆವೇರಿಸುವುದರಿಂದ ದೇವಿಯ ಮಹಿಮೆ ಹೊರ ರಾಜ್ಯಗಳಿಗೂ ಹಬ್ಬಿದೆ. ಬೆಂಗಳೂರು ನಗರ, ಗ್ರಾಮಾಂತರ, ಕೋಲಾರ, ಮಾಲೂರು ಸೇರಿ ರಾಜ್ಯದ ವಿವಿಧ ಪ್ರದೇಶಗಳಿಂದಷ್ಟೇ ಅಲ್ಲದೆ ನೆರೆಯ ತಮಿಳುನಾಡು, ಆಂಧ್ರದ ಭಕ್ತರು ಇಲ್ಲಿಗೆ ಬರಲು ಪ್ರಾರಂಭಿಸಿದ್ದಾರೆ.
ಈ ದೇವಿಗೆ ಪ್ರತಿ ಶುಕ್ರವಾರದಂದು ಭಕ್ತರು ಇಲ್ಲಿಗೆ ಭೇಟಿ ನೀಡಿ ಒಂದು ತಟ್ಟೆಯಲ್ಲಿ ಮೂರು ಹಿಡಿ ಅಕ್ಕಿ ಹಾಕಿಕೊಂಡು ಎರಡು ಅಚ್ಚುಬೆಲ್ಲದಲ್ಲಿ ತುಪ್ಪದ ದೀಪ ಮಾಡಿ ರಾಹುಕಾಲದಲ್ಲಿ ತಾಯಿಗೆ ಹರಕೆ ಹೊತ್ತುಕೊಂಡು, ಆರತಿ ಮಾಡಿದರೆ ಭಕ್ತರ ಕೋರಿಕೆಗಳು ನೆರವೇರುತ್ತವೆ ಎಂಬುದು ಇಲ್ಲಿಗೆ ಬರುವ ಭಕ್ತರ ನಂಬಿಕೆ.