ಹೊಸಕೋಟೆ(ಬೆಂ.ಗ್ರಾಮಾಂತರ): ಮಕ್ಕಳು ಹಾಗೂ ಗರ್ಭಿಣಿಯರಿಗೆ ಸೇರಬೇಕಾದ ದಿನಸಿ ಪದಾರ್ಥಗಳು, ಅಂಗನವಾಡಿ ಕಾರ್ಯಕರ್ತೆಯ ಮನೆಗೆ ಸೇರಿರುವ ಘಟನೆ ಹೊಸಕೋಟೆ ತಾಲೂಕಿನ ತರಬಹಳ್ಳಿ ಗ್ರಾಮದಲ್ಲಿ ನಡೆದಿದೆ.
ತರಬಹಳ್ಳಿ ಗ್ರಾಮದ ಅಂಗನವಾಡಿಯಲ್ಲಿ 45ಕ್ಕೂ ಅಧಿಕ ಮಕ್ಕಳಿದ್ದು, ಹಲವು ಗರ್ಭಿಣಿಯರಿದ್ದಾರೆ. ಪ್ರತಿ ಮೂರು ತಿಂಗಳಿಗೊಮ್ಮೆ ಅಂಗನವಾಡಿಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಅಗತ್ಯ ದಿನಸಿ ಪದಾರ್ಥಗಳನ್ನ ಕಳುಹಿಸಿಕೊಡಳಾಗುತ್ತದೆ.
ಕಳುಹಿಸಿಕೊಟ್ಟ ಆಹಾರ ದಿನಸಿ ಪದಾರ್ಥಗಳನ್ನ ಅಂಗನವಾಡಿಯಲ್ಲಿ ದಾಸ್ತಾನು ಮಾಡುವ ಬದಲು ಅಂಗನವಾಡಿ ಕಾರ್ಯಕರ್ತೆ ಸುಮಂಗಲ ಎಂಬುವರು ತಮ್ಮ ನಿವಾಸ ನಂದಗುಡಿಗೆ ತರಿಸಿಕೊಂಡಿದ್ದಾರೆ.
ತರಬಹಳ್ಳಿಗೆ ಸೇರಬೇಕಿದ್ದ ದಿನಸಿಯನ್ನ ಅಂಗನವಾಡಿ ಕಾರ್ಯಕರ್ತೆ ಲಪಟಾಯಿಸುತ್ತಿರುವ ಆರೋಪ ಕೇಳಿ ಬಂದಿದ್ದು, ಗ್ರಾಮಸ್ಥರು ದಿನಸಿ ಪದಾರ್ಥಗಳ ಲಾರಿ ಲೋಡ್ ಅಂಗನವಾಡಿ ಕಾರ್ಯಕರ್ತೆಯ ಮನೆಗೆ ತಲುಪಿಸುವಾಗ ಪ್ರತ್ಯಕ್ಷವಾಗಿ ಹಿಡಿದಿದ್ದಾರೆ.
ಈ ಸಂಬಂಧ ಗ್ರಾಮಸ್ಥರು ಹೊಸಕೋಟೆ ಸಿಡಿಪಿಒಗೆ ದೂರನ್ನ ಕೊಟ್ಟಿದ್ದು, ಈ ಬಗ್ಗೆ ತನಿಖೆಯನ್ನ ನಡೆಸಿ ಅಂಗನವಾಡಿ ಕಾರ್ಯಕರ್ತೆಯ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.