ಬೆಂಗಳೂರು: ಕಾಂಗ್ರೆಸ್ ಸದಸ್ಯರ ಧರಣಿ ಮಧ್ಯೆಯೇ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಭಾರತದ ಸಂವಿಧಾನದ ಕುರಿತ ವಿಶೇಷ ಚರ್ಚೆ ಮೇಲಿನ ಪ್ರಸ್ತಾವಿಕ ಭಾಷಣ ಮಾಡಿದರು.
ಮಧ್ಯಾಹ್ನ ವಿಧಾನಸಭೆ ಕಲಾಪ ಪುನರಾರಂಭವಾಗುತ್ತಿದ್ದಂತೆಯೇ ಕಾಂಗ್ರೆಸ್ ಧರಣಿ ಮುಂದುವರಿಸಿತು. ಈ ವೇಳೆ ಸ್ಪೀಕರ್, ನೀವು ಹೀಗಿರೋದು ನನ್ನ ಮನಸ್ಸಿಗೆ ಇಚ್ಛೆಯಿಲ್ಲ. ನೀವು ಸಂವಿಧಾನದ ಚರ್ಚೆಯಲ್ಲಿ ಭಾಗವಹಿಸದೇ ಇರುವ ನಿರ್ಣಯ ಮಾಡಿದ್ರೆ ಮನಸ್ಸಿಲ್ಲದ ಮನಸ್ಸಿನಿಂದ ನಾನು ಪ್ರಸ್ತಾವನೆ ಓದಬೇಕಾಗುತ್ತದೆ. ಎಲ್ಲರೂ ಎದ್ದು ನಿಂತು ಭಾರತದ ಸಂವಿಧಾನದ ಪ್ರಸ್ತಾವನೆ ಓದಬೇಕೆಂದು ಮನವಿ ಮಾಡಿದರು.
ಆದರೆ ಕಾಂಗ್ರೆಸ್ ಸದಸ್ಯರು ಪಟ್ಟು ಸಡಿಲಿಸದ ಕಾರಣ ಸ್ಪೀಕರ್ ಪೀಠದಿಂದ ಎದ್ದು ನಿಂತು ಸಂವಿಧಾನ ಕುರಿತ ವಿಶೇಷ ಚರ್ಚೆಯ ಪ್ರಸ್ತಾವನೆಯನ್ನು ಓದಿದರು. ಇತ್ತ ಕಾಂಗ್ರೆಸ್ ಸದಸ್ಯರು ಬಾವಿಗಿಳಿದು ತಮ್ಮ ಧರಣಿ ಮುಂದುವರಿಸಿದರು. ಉಳಿಸಿ ಉಳಿಸಿ ಸಂವಿಧಾನ ಉಳಿಸಿ, ಒಂದೇ ಮಾತರಂ, ಭಾರತ್ ಮಾತಾಕೀ ಜೈ ಮುಂತಾದ ಘೋಷಣೆಗಳನ್ನು ಕೂಗಿದರು. ಸ್ಪೀಕರ್ ಸುಮಾರು ನಲವತ್ತು ನಿಮಿಷಗಳ ಕಾಲ ಸಂವಿಧಾನದ ಪ್ರಸ್ತಾವನೆಯನ್ನು ಓದಿದರು. ಸ್ಪೀಕರ್ ಭಾಷಣ ಮಾಡುತ್ತಿದ್ದರೆ ಅತ್ತ ಕಾಂಗ್ರೆಸ್ ಸದಸ್ಯರು ಘೋಷಣೆಗಳನ್ನು ಕೂಗಿ, ತಮ್ಮ ಧರಣಿ ಮುಂದುವರಿಸಿದರು.
ಕಾಂಗ್ರೆಸ್ ನಡವಳಿಕೆಗೆ ಸ್ಪೀಕರ್ ಆಕ್ರೋಶ:
ತಮ್ಮ ಪ್ರಾಸ್ತಾವಿಕ ಭಾಷಣದ ವೇಳೆ ಕಾಂಗ್ರೆಸ್ ಸದಸ್ಯರು ಧರಣಿ ನಡೆಸಿರುವುದಕ್ಕೆ ಸ್ಪೀಕರ್ ಕಾಗೇರಿ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ನೀವು ನಡೆದುಕೊಂಡ ರೀತಿ ಸರಿಯಲ್ಲ. ಪ್ರಜಾಪ್ರಭುತ್ವಕ್ಕೆ ಇದು ಶೋಭೆ ತರಲ್ಲ. ನಿಮ್ಮ ವರ್ತನೆ ಸಂವಿಧಾನದ ಆಶಯಕ್ಕೆ ವಿರುದ್ಧವಾಗಿದೆ. ಇದನ್ನು ನಾನು ಒಪ್ಪಲ್ಲ. ಸಂವಿಧಾನದ ಶಿಲ್ಪಿಗೆ ನೀವು ತೋರಿದ ಅಗೌರವ ಕರ್ನಾಟಕಕ್ಕೆ ಹೆಮ್ಮೆ ತರಲ್ಲ. ಇದು ಸಂವಿಧಾನ ವಿರೋಧಿ ನೀತಿ. ನಿಮ್ಮ ವರ್ತನೆ ಸದನಕ್ಕೆ ಗೌರವ ತರುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಂವಿಧಾನಕ್ಕೆ ಗೌರವ ತೋರಿ. ಚರ್ಚೆಯಲ್ಲಿ ಭಾಗವಹಿಸಿ, ಮನವಿ ಮಾಡುತ್ತೇನೆ. ಇದು ಒಳ್ಳೆಯ ಪದ್ಧತಿಯಲ್ಲ. ನೀವು ಅರವತ್ತು ವರ್ಷಗಳ ಕಾಲ ದೇಶದಲ್ಲಿ ಆಡಳಿತ ನಡೆಸಿದ್ದೀರಿ. ರಾಜ್ಯದ ಜನ ಏನು ನಡೆಯುತ್ತಿದೆ ಎಂಬುದನ್ನು ನೋಡುತ್ತಿದ್ದಾರೆ ಎಂದು ತಮ್ಮ ಅಸಮಾಧಾನ ಹೊರಹಾಕಿದ ಸ್ಪೀಕರ್, ಕಲಾಪವನ್ನು ನಾಳೆಗೆ ಮುಂದೂಡಿದರು.