ಆನೇಕಲ್(ಬೆಂಗಳೂರು): ವಿವಿಧ ಕಾಯ್ದೆಗಳ ತಿದ್ದುಪಡಿ ಜನ ವಿರೋಧಿಯಾಗಿದ್ದು, ಇಂತಹ ಕಾರ್ಯವನ್ನು ಕೈಬಿಡಬೇಕು ಎಂದು ಒತ್ತಾಯಿಸಿ ಕಾಂಗ್ರೆಸ್ನಿಂದ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು.
ಬಿಜೆಪಿ ಆಡಳಿತಕ್ಕೆ ಬಂದಾಗಿನಿಂದ ರೈತರು, ಬಡವರ ವಿರೋಧಿ ನೀತಿಗಳನ್ನು ಅನುಷ್ಠಾನಗೊಳಿಸುತ್ತಲೇ ಇದೆ. ರಾಜ್ಯದ ಹಿತ ಕಾಪಾಡಬೇಕಾದ ಸಂಸದರು ಕೇಂದ್ರ ಸರ್ಕಾರದಲ್ಲಿ ಮೌನವಹಿಸಿದ್ದಾರೆ. ಇದು ಜನತೆಗೆ ಮಾರಕವಾಗಿ ಪರಿಣಮಿಸಿದೆ ಎಂದು ಆನೇಕಲ್, ಬೆಂಗಳೂರು ದಕ್ಷಿಣ - ಉತ್ತರ ವಿಧಾನಸಭಾ ಕ್ಷೇತ್ರಗಳ ಕಾಂಗ್ರೆಸ್ ಮುಖಂಡರು ದೂರಿದ್ದಾರೆ. ಅಲ್ಲದೇ ಈ ಸಂಬಂಧ ಇಂದು ಆನೇಕಲ್ ಪಟ್ಟಣದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು.
ಹೊಸ ಶೈಕ್ಷಣಿಕ ನೀತಿ, ಭೂ ಸುಧಾರಣಾ ಕಾಯಿದೆ, ಇತ್ತೀಚೆಗೆ ಕೊರೊನಾದ ನೆಪದಲ್ಲಿ ಭ್ರಷ್ಟಾಚಾರದಲ್ಲೂ ಸರ್ವಾಧಿಕಾರಿ ಧೋರಣೆ ಮೆರೆಯುತ್ತಿರುವ ಸರ್ಕಾರದ ನಿಯಮಗಳು ಜನರನ್ನು ಬಾಧಿಸುತ್ತಿವೆ ಎಂದು ಅಭಿಪ್ರಾಯಪಟ್ಟರು.
ಈ ವೇಳೆ, ತಹಶೀಲ್ದಾರ್ ಮುಖಾಂತರ ರಾಜ್ಯಪಾಲರಿಗೆ ಮನವಿ ಪತ್ರವನ್ನು ರವಾನಿಸಿದ ಕಾಂಗ್ರೆಸ್ ಮುಖಂಡರು ಬಿಜೆಪಿ ಜನಪ್ರತಿನಿಧಿಗಳ ವಿರುದ್ದ ವಾಗ್ದಾಳಿ ನಡೆಸಿದರು.