ದೊಡ್ಡಬಳ್ಳಾಪುರ: ಇಲ್ಲಿನ ರೋಜಿಪುರದ ಸ್ಮಶಾನದಲ್ಲಿ ಬಾಡೂಟ ಕಾರ್ಯಕ್ರಮ ಆಯೋಜಿಸುವ ಮೂಲಕ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ 67ನೇ ಪರಿನಿರ್ವಾಣ ದಿನವನ್ನು ಮೌಢ್ಯ ವಿರೋಧಿ ದಿನವನ್ನಾಗಿ ಆಚರಿಸಲಾಯಿತು. ಸಂವಿಧಾನ ರಕ್ಷಣೆಗಾಗಿ ನಾಗರಿಕರ ವೇದಿಕೆ ಸಂಘಟನೆ ಆಯೋಜಿಸಿದ್ದ ಈ ಕಾರ್ಯಕ್ರಮದಲ್ಲಿ ಪ್ರಗತಿಪರ ಚಿಂತಕರು, ಸಾಹಿತಿಗಳು, ದಲಿತ ಮುಖಂಡರು ಮತ್ತು ಕಾಲೇಜು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಸಮಾಧಿಗಳ ಮೇಲೆ ಕುಳಿತು ಬಿರಿಯಾನಿ ಸವಿದರು.
2021ರಿಂದ ಅಂಬೇಡ್ಕರ್ ಪರಿನಿರ್ವಾಣ ದಿನವನ್ನು ಮೌಢ್ಯವಿರೋಧಿ ದಿನವನ್ನಾಗಿ ಆಚರಣೆ ಮಾಡಲಾಗುತ್ತಿದೆ. ಸಮಾಜದಲ್ಲಿ ಮೌಢ್ಯ ಹೋಗುವವರೆಗೂ ಸಮಾನತೆಯ ಮಹತ್ವ ಅರಿವಾಗುವುದಿಲ್ಲ. ಸಮಾಜದ ಮೌಢ್ಯ ಆಚರಣೆ ಬದಲಾಗಬೇಕು. ಸ್ಮಶಾನದ ಅಂಜಿಕೆ ಇಲ್ಲದೆ ಭೂಮಿ ಮೇಲಿರುವ ಪ್ರತಿಯೊಂದು ಜಾಗವೂ ಪವಿತ್ರ. ಹೀಗಾಗಿ ಮೌಢ್ಯತೆಯಿಂದ ಜನರನ್ನು ಹೊರತರಬೇಕು ಎಂಬುದೇ ನಮ್ಮ ಉದ್ದೇಶ ಎಂದು ಕಾರ್ಯಕ್ರಮ ಆಯೋಜಕರಾದ ಗೂಳ್ಯ ಹನುಮಣ್ಣ ತಿಳಿಸಿದರು.
ಇವತ್ತು ವಿದ್ಯಾವಂತರೇ ಮೂಢನಂಬಿಕೆಗಳಿಗೆ ದಾಸರಾಗಿರುವುದು ವಿಷಾದದ ಸಂಗತಿ. ಅದರಲ್ಲೂ ವಿಜ್ಞಾನ ಅರಿತು ಅಭ್ಯಾಸ ಮಾಡಿರುವ ವಿದ್ಯಾವಂತರೇ ಮೌಢ್ಯತೆಯ ಮೋರೆಹೋಗುತ್ತಿರುವುದು ಸರಿಯಲ್ಲ. ಸಾಮಾನ್ಯವಾಗಿ ಸ್ಮಶಾನಕ್ಕೆ ಬರಲು ಹೆದರುವ ಜನರ ನಡುವೆ ಇಂದು ಸ್ಮಶಾನದಲ್ಲಿ ಊಟ ಸವಿದಿದ್ದೇವೆ. ಮೌಢ್ಯ ವಿರೋಧಿ ದಿನವನ್ನು ಆಚರಿಸಿದ್ದೇವೆ ಎನ್ನುತ್ತಾರೆ ವಿದ್ಯಾರ್ಥಿ ಹೇಮಂತ್.
ಇದನ್ನೂ ಓದಿ: ಸಂವಿಧಾನ ದಿನ: ಡಾ.ಬಿ.ಆರ್.ಅಂಬೇಡ್ಕರ್ ಭಾವಚಿತ್ರಕ್ಕೆ ಸಿದ್ದರಾಮಯ್ಯ ಮಾಲಾರ್ಪಣೆ