ಬೆಂಗಳೂರು: ಕುಡಿತದ ದಾಸರನ್ನ ಮದ್ಯ ಮುಕ್ತರನ್ನಾಗಿ ಮಾಡುವ ಕೆಲಸವನ್ನ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನಾ ಟ್ರಸ್ಟ್ ನಿರಂತರ ಮಾಡುತ್ತಲೇ ಬಂದಿದೆ. ಸದ್ಯ ಇದೇ ನಿಟ್ಟಿನಲ್ಲಿ ದೇವನಹಳ್ಳಿಯ ಬೂದಿಗೆರೆಯಲ್ಲಿ ಮದ್ಯವರ್ಜನ ಶಿಬಿರ ಆಯೋಜನೆ ಮಾಡಿ ನೂರಾರು ಕುಟುಂಬಗಳಿಗೆ ದಾರಿ ದೀಪವಾಗಿದೆ.
ದೇವನಹಳ್ಳಿ ತಾಲೂಕು ಬೂದಿಗೆರೆ ಗ್ರಾಮದ ಸಂಸ್ಕೃತಿ ಕನ್ವೆನ್ಷನ್ ಹಾಲ್ನಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ವತಿಯಿಂದ 1423ನೇ ಮದ್ಯವರ್ಜನ ಶಿಬಿರವನ್ನು ಆಯೋಜನೆ ಮಾಡಲಾಗಿತ್ತು. ಶಿಬಿರದಲ್ಲಿ ಒಟ್ಟು 56 ಮಂದಿ ಮದ್ಯ ವ್ಯಸನಿಗಳು ಭಾಗವಹಿಸಿದ್ದರು. ಒಂದು ವಾರಗಳ ಕಾಲ ನಡೆದ ಶಿಬಿರದಲ್ಲಿ ದೇವನಹಳ್ಳಿ ತಾಲೂಕು ಸೇರಿದಂತೆ ಸುತ್ತಮುತ್ತಲಿನ ತಾಲೂಕು, ಜಿಲ್ಲೆಗಳಿಂದಲೂ ಕುಡಿತಕ್ಕೆ ದಾಸರಾಗಿದ್ದ ಹಲವಾರು ಮಂದಿ ಬಂದು ಕುಡಿತದ ಚಟದಿಂದ ಮುಕ್ತರಾದರು.
ಹಲವೆಡೆ ಮದ್ಯವರ್ಜನ ಶಿಬಿರಗಳನ್ನು ಖಾಸಗಿಯಾಗಿ ನಡೆಸುತ್ತಿದ್ದು, ಸಾವಿರಾರು ರೂಪಾಯಿಗಳನ್ನು ತೆರಬೇಕಾಗಿದೆ. ಆದರೆ, ಧರ್ಮಸ್ಥಳ ಕ್ಷೇತ್ರ ಈ ಸೇವೆಯನ್ನು ಉಚಿತವಾಗಿ ನೀಡುತ್ತಿರುವುದು ವಿಶೇಷವಾಗಿದೆ. ಈ ಕಾರ್ಯಗಾರವು ಈವರೆಗೂ ಎಲ್ಲಾ ಕಡೆಗಳಲ್ಲೂ ಯಶಸ್ವಿಯಾಗುತ್ತಾ ಬಂದಿದ್ದು, ಬೂದಿಗೆರೆಯಲ್ಲಿಯೂ ಎಲ್ಲರ ಮೆಚ್ಚುಗೆ ಗಳಿಸಿದೆ.
ಶಿಬಿರದ ಮತ್ತೊಂದು ವಿಶೇಷತೆ ಅಂದ್ರೆ ಕುಡಿತದಿಂದ ಮುಕ್ತಿ ಪಡೆಯಲು ಇಲ್ಲಿಗೆ ಬಂದಂತ ಶಿಬಿರಾರ್ಥಿಗಳು ಬಿಳಿ ಸಮವಸ್ತ್ರ ಧರಿಸಿ ಇನ್ಮುಂದೆ ಕುಡಿತವನ್ನು ಬಿಟ್ಟು ಶಾಂತಿಯಿಂದ ಜೀವನ ನಡೆಸುತ್ತೇವೆ ಎಂದು ಪ್ರತಿಜ್ಞೆ ಮಾಡಿದ್ರು.