ದೇವನಹಳ್ಳಿ: ವಿಮಾನಗಳ ಸುರಕ್ಷಿತ ಹಾರಾಟಕ್ಕೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭಾರತೀಯ ವಾಯುಪಡೆ ರೇಡಾರ್ಗಳ ಅಳವಡಿಕೆಗೆ ರಕ್ಷಣಾ ಸಚಿವಾಲಯ ಮುಂದಾಗಿದೆ.
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಎರಡನೇ ರನ್ ವೇ ಕಾರ್ಯರಂಭ ಮಾಡಿದ್ದು, ವಿಮಾನಗಳ ಹಾರಾಟ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. ಇದರ ಜೊತೆಗೆ ವಿಮಾನಗಳ ಸಂಚಾರಕ್ಕೆ ಸುರಕ್ಷತೆಯನ್ನು ಕೊಡುವ ಜವಾಬ್ದಾರಿ ಕೂಡ ಹೆಚ್ಚಾಗಿದೆ. ವಿಮಾನಗಳ ಹಾರಾಟದ ವೇಳೆ ಮಾರ್ಗ ಉಲ್ಲಂಘನೆ ಉಂಟಾಗದಂತೆ ರಕ್ಷಣಾ ಸಚಿವಾಲಯವು ರೇಡಾರ್ಗಳ ಅಳವಡಿಕೆಗೆ ಮುಂದಾಗಿದೆ.
ಈಗಾಗಲೇ ನಿಯಂತ್ರಣ ಕೇಂದ್ರದಲ್ಲಿ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ ಸ್ಥಾಪಿಸಿರುವ ರೇಡಾರ್ಗಳಿದ್ದು, ಇದರ ಜೊತೆಯಲ್ಲಿ ವಾಯುಪಡೆಯ ರೇಡಾರ್ಗಳೂ ಕಾರ್ಯ ನಿರ್ವಹಿಸುತ್ತವೆ. ಹೀಗೆ ನಾಗರಿಕ ವಿಮಾನ ಸೇವೆಗೆ ಸಂಬಂಧಿಸಿದ ರೇಡಾರ್ ಮತ್ತು ಸೇನಾ ರೇಡಾರ್ಗಳು ಒಂದೇ ಕಡೆ ಕೆಲಸ ನಿರ್ವಹಿಸುತ್ತಿರುವುದು ದೇಶದಲ್ಲಿಯೇ ಮೊದಲು ಎಂಬ ಹೆಗ್ಗಳಿಕೆಗೆ ಕೆಂಪೇಗೌಡ ವಿಮಾನ ನಿಲ್ದಾಣ ಪಾತ್ರವಾಗಿದೆ.
ಈ ವ್ಯವಸ್ಥೆಯು ಸಮೀಪದಲ್ಲಿರುವ ಯಲಹಂಕ ವಾಯುನೆಲೆಯ ನಿಲ್ದಾಣಕ್ಕೂ ಕಣ್ಗಾವಲು ಇಡಲಿದೆ. ಇದಕ್ಕೆ ಸಂಬಂಧಪಟ್ಟಂತೆ ಭಾರತೀಯ ವಾಯುಪಡೆ ವಿಮಾನ ಮತ್ತು ಹೆಲಿಕಾಪ್ಟರ್ ಪ್ರಾಯೋಗಿಕ ತರಬೇತಿ ನಡೆಯುತ್ತಿದೆ.