ದೇವನಹಳ್ಳಿ: ರಮೇಶ್ ಜಾರಕಿಹೊಳಿ ಸಿಡಿ ಕೇಸ್ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮೊದಲ ಬಾರಿಗೆ ಪ್ರತಿಕ್ರಿಯಿಸಿದ್ದು, "ರಮೇಶ್ ಜಾರಕಿಹೊಳಿ ಅವರು ಒತ್ತಡಕ್ಕೆ ಒಳಗಾಗಿದ್ದಾರೆ. ಅವರಿಗೆ ಮಂತ್ರಿ ಸ್ಥಾನ ಸಿಗಬೇಕಿತ್ತು ಎನ್ನುವುದಿತ್ತು. ಆದರೆ ಅವರ ಪಕ್ಷ ಕೊಡಲಿಲ್ಲ. ಆದಷ್ಟು ಬೇಗ ಅವರನ್ನು ಪಕ್ಷದವರು ಆಸ್ಪತ್ರೆಗೆ ಸೇರಿಸುವ ವ್ಯವಸ್ಥೆ ಮಾಡಬೇಕು. ಎಲೆಕ್ಷನ್ನಲ್ಲಿ ಭೇಟಿ ಮಾಡೋಣ ಎಂದು ಹೇಳಿದ್ದಾರೆ, ಭೇಟಿ ಮಾಡೋಣ" ಎಂದು ವ್ಯಂಗ್ಯವಾಡಿದರು.
ಭಾರತ್ ಜೋಡೊ ಯಾತ್ರೆಯ ಸಮಾರೋಪಕ್ಕೆ ಶ್ರೀನಗರಕ್ಕೆ ತೆರಳಿದ್ದ ಡಿಕೆಶಿ, ಇಂದು ಮಧ್ಯಾಹ್ನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದರು. ಈ ವೇಳೆ ರಮೇಶ್ ಜಾರಕಿಹೊಳಿ ಸಿಡಿ ವಿಚಾರವಾಗಿ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ್ದಾರೆ. ರಮೇಶ್ ಜಾರಕಿಹೊಳಿ ಇತ್ತೀಚೆಗೆ ಒಂದಾದ ಮೇಲೊಂದು ಸುದ್ದಿಗೋಷ್ಠಿ ನಡೆಸಿ, ಡಿಕೆಶಿ ವಿರುದ್ಧ ಹಲವು ಆರೋಪಗಳನ್ನು ಮಾಡಿದ್ದರು. "ಡಿಕೆಶಿ ವಿದೇಶದಲ್ಲಿ ಮನೆ ಹಾಗೂ ಆಸ್ತಿ ಹೊಂದಿರುವ ಬಗ್ಗೆ ಮಾತನಾಡಿರುವ ಆಡಿಯೋ ನನ್ನಲ್ಲಿದೆ. ಅದನ್ನು ತನಿಖೆಗೆ ಸಿಬಿಐಗೆ ನೀಡುತ್ತೇನೆ. ನನ್ನ ವೈಯಕ್ತಿಕ ಜೀವನವನ್ನು ಆತ ಹಾಳು ಮಾಡಿದ್ದಾನೆ. ಸಿಡಿ ಮಹಾನಾಯಕನೇ ಡಿಕೆಶಿ" ಎಂದಿದ್ದರು. "ಯಾವ ಆಸ್ತಿ, ಯಾವ ಆಡಿಯೋ? ಯಾರ ಆಡಿಯೋನೋ ಎಲ್ಲವನ್ನೂ ಅವರು ಮಾಡಿಕೊಳ್ಳಲಿ" ಎಂದು ಈ ಆರೋಪಕ್ಕೆ ಡಿಕೆಶಿ ಉತ್ತರಿಸಿದ್ದಾರೆ. ಸಿಬಿಐ ತನಿಖೆಗೆ ರಮೇಶ್ ಜಾರಕಿಹೊಳಿ ಒತ್ತಡಕ್ಕೆ ಸಂಬಂಧಪಟ್ಟಂತೆ ಪ್ರತಿಕ್ರಿಯಿಸಲು ನಿರಾಕರಿಸಿದರು.
ಕೇಂದ್ರ ಬಜೆಟ್ ಕುರಿತು ಪ್ರತಿಕ್ರಿಯೆ ನೀಡಿದ ಡಿ.ಕೆ.ಶಿವಕುಮಾರ್, "ರಾಜಕೀಯ ದೃಷ್ಟಿ ಇಟ್ಟುಕೊಂಡು ಬಜೆಟ್ ಮಂಡನೆ ಮಾಡಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿದೆ. ಸಿರಿಧಾನ್ಯ ಎನ್ನುವ ಹೆಸರಿನಲ್ಲಿ ಯೋಜನೆಗಳನ್ನು ಘೋಷಣೆ ಮಾಡಿದ್ದಾರೆ. ಆದರೆ ನಮ್ಮ ರಾಗಿಗೆ ಕನಿಷ್ಟ ಬೆಂಬಲ ಬೆಲೆ ನೀಡುವ ಕುರಿತು ಏನೂ ಹೇಳಿಲ್ಲ. ರಾಜ್ಯಕ್ಕೆ ನೀರಾವಾರಿ ವಿಭಾಗಕ್ಕೆ ಮೂರು ಸಾವಿರ ಕೋಟಿ ಏನೋ ಕೊಟ್ಟಿದ್ದಾರೆ. ನಾನು ಈಗಷ್ಟೇ ಬರುತ್ತಿದ್ದೇನೆ. ಬಜೆಟ್ ಬಗ್ಗೆ ಅಧ್ಯಯನ ಮಾಡಿ ನಂತರ ಮಾತನಾಡುತ್ತೇನೆ" ಎಂದು ಹೇಳಿದರು.
ಮೆಕ್ಕಾದಿಂದ ಬಂದಿಳಿದ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮದ್ ಮಾತನಾಡಿ, "ರಮೇಶ್ ಜಾರಕಿಹೊಳಿ ಓರ್ವ ಆರೋಪಿ. ಕಾಂಗ್ರೆಸ್ ಬಗ್ಗೆ ಮಾತನಾಡುವ ನೈತಿಕ ಹಕ್ಕು ಅವರಿಗಿಲ್ಲ. ಪುರಾವೆಗಳಿಲ್ಲದೆ ಬಾಯಿಗೆ ಬಂದ ಹಾಗೆ ಮಾತನಾಡಬಾರದು. ಚುನಾವಣಾ ಸಂದರ್ಭದಲ್ಲಿ ಇಂತಹ ಹೇಳಿಕೆಗಳು ನಮಗೆ ಅರ್ಥವಾಗುತ್ತವೆ" ಎಂದರು.
ಡಿಕೆಶಿ ವಿರುದ್ಧ ರಮೇಶ್ ಜಾರಕಿಹೊಳಿ ಆರೋಪದ ಕುರಿತು ಪ್ರತಿಕ್ರಿಯಿಸಿ, "ಅವರ ಪಕ್ಷ ಕೊನೆಯ 90 ದಿನಗಳನ್ನು ಎಣಿಸುತ್ತಿದೆ. ಈ ಸಂದರ್ಭದಲ್ಲಿ ಇಂತಹ ಬಾಲಿಶ ಹೇಳಿಕೆಗಳನ್ನು ನಾವು ಖಂಡಿಸುತ್ತೇವೆ. ಇವರ ಆರೋಪಗಳಲ್ಲಿ ಯಾವುದೇ ಸತ್ಯಾಂಶವಿಲ್ಲ. ಡಿಕೆಶಿಯವರಿಗೆ ನಿರಂತರವಾಗಿ ಸಿಬಿಐ, ಇಡಿ,ಐಟಿ ಕಿರುಕುಳ ಕೊಡ್ತಿದ್ದಾರೆ. ಈ ಬಗ್ಗೆ ನಾವೂ ಸಹ ನಿರಂತರ ಹೋರಾಟ ಮಾಡ್ತಿದ್ದೇವೆ. ಇದೆಲ್ಲವನ್ನು ಜನ ಅರ್ಥಮಾಡಿಕೊಳ್ಳುತ್ತಾರೆ" ಎಂದರು.
ಇದನ್ನೂ ಓದಿ: ಸಿಡಿ ಮಹಾನಾಯಕನೇ ಡಿಕೆಶಿ: ರಮೇಶ್ ಜಾರಕಿಹೊಳಿ ಆರೋಪ