ಆನೇಕಲ್: 10 ಮಂದಿ ಪ್ರಯಾಣಿಕರು ಚಲಿಸುತ್ತಿದ್ದ ಕಾರಿಗೆ ಏಕಾಏಕಿ ಬೆಂಕಿ ಹೊತ್ತಿಕೊಂಡು, ಸುಟ್ಟು ಭಸ್ಮವಾದ ಘಟನೆ ಆನೇಕಲ್ ತಾಲೂಕಿನ ಅತ್ತಿಬೆಲೆಯ ಮೇಲ್ಸೇತುವೆ ಮೇಲೆ ನಡೆದಿದೆ.
ಬೆಂಗಳೂರಿನ ಜೆಪಿ ನಗರ ನಿವಾಸಿ ಸೈಯದ್ ಎಂಬುವವರಿಗೆ ಸೇರಿದ KA-04-MB 6632 ಸ್ಕಾರ್ಪಿಯೋ ಕಾರಿಗೆ ಆಕಸ್ಮಿಕ ಬೆಂಕಿ ಹೊತ್ತಿದ್ದು, ಸುಟ್ಟು ಕರಕಲಾಗಿದೆ. ಸೈಯದ್ ಅವರ ಕುಟುಂಬದ ಒಟ್ಟು 10 ಮಂದಿ ಈ ಕಾರಿನಲ್ಲಿ ತಮಿಳುನಾಡಿನ ಹೊಸೂರಿನತ್ತ ತೆರಳುತ್ತಿದ್ದರು. ಈ ವೇಳೆ ಏಕಾಏಕಿ ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ಚಾಲಕ ಕಾರನ್ನು ರಸ್ತೆ ಬದಿಗೆ ನಿಲ್ಲಿಸಿದ್ದು, ಕ್ಷಣಾರ್ಧದಲ್ಲಿ 10 ಜನರು ಕಾರಿನಿಂದ ಇಳಿದು ಅಪಾಯದಿಂದ ಪಾರಾಗಿದ್ದಾರೆ.
ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಬರುವುದರೊಳಗೆ ಕಾರು ಸಂಪೂರ್ಣ ಸುಟ್ಟು ಭಸ್ಮವಾಗಿದ್ದು, ಈ ಸಂಬಂಧ ಅತ್ತಿಬೆಲೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.