ಆನೇಕಲ್: ಮನೆ ಬಳಿಯ ಅಂಗಡಿಯಲ್ಲಿ ವ್ಯಾಪಾರ ಮಾಡುತ್ತಿದ್ದ ಯುವತಿಗೆ ಯುವಕನೊಬ್ಬ ಚಾಕುವಿನಿಂದ ಇರಿದು ಪರಾರಿಯಾಗಿರುವ ಘಟನೆ ಬನ್ನೇರುಘಟ್ಟದ ನಾರಾಯಣರಾಜು ಬಡಾವಣೆಯಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಘಟನೆಯಲ್ಲಿ ನಾರಾಯಣರಾಜು ಬಡಾವಣೆಯ 23 ವರ್ಷದ ಯುವತಿ ಗಂಭೀರವಾಗಿ ಗಾಯಗೊಂಡಿದ್ದಾಳೆ.
ಘಟನೆಯ ವಿವರ : ಕಳೆದ ಭಾನುವಾರ ರಾತ್ರಿ 8.30ರ ಸುಮಾರಿಗೆ ಯುವತಿ ತನ್ನ ಮನೆ ಬಳಿಯ ಅಂಗಡಿಯಲ್ಲಿ ವ್ಯಾಪಾರ ಮಾಡುತ್ತಿದ್ದಳು. ಈ ವೇಳೆ ಬಂದ ಯುವಕನೋರ್ವ ಏಕಾಏಕಿ ಈಕೆಯ ಕತ್ತಿಗೆ ಚಾಕುವಿನಿಂದ ಚುಚ್ಚಲು ಯತ್ನಿಸಿದ್ದ. ಈ ವೇಳೆ ಆಕೆ ಕೈಯಿಂದ ತಡೆದಿದ್ದಳು. ಇದರಿಂದ ಆಕೆಯ ಕೈ ಮತ್ತು ಹಣೆಯ ಭಾಗಕ್ಕೆ ಗಂಭೀರ ಗಾಯಗಳಾಗಿವೆ.
ಓದಿ : "ಗನ್ ಹಿಡಿದ್ರೆ ಆ ಫೀಲೇ ಬೇರೆ ಸರ್" ಅಂತಿದ್ದ ರೌಡಿಶೀಟರ್ ಮಧುಸೂದನ್ ಅರೆಸ್ಟ್
ಹಲ್ಲೆ ಮಾಡಿದ ಬಳಿಕ ಆರೋಪಿ ಸ್ಥಳದಿಂದ ಪರಾರಿಯಾಗಿದ್ದಾನೆ. ಮಳೆ ಬರುತ್ತಿದ್ದರಿಂದ ಕತ್ತಲಿನಲ್ಲಿ ಆರೋಪಿಯ ಚಹರೆ ಗೊತ್ತಾಗಿಲ್ಲ ಎಂದು ಯುವತಿ ದೂರಿನಲ್ಲಿ ತಿಳಿಸಿದ್ದಾಳೆ.
ಹಲ್ಲೆ ನಡೆದ ಎರಡು ದಿನದ ಹಿಂದೆ ಯುವತಿ ಯುವತಿಗೆ ಮದುವೆಯಾಗು ಎಂದು ಯುವಕನೊಬ್ಬ ಪೀಡಿಸಿದ್ದನಂತೆ. ಆದರೆ, ಯುವತಿ ಅದಕ್ಕೆ ನಿರಾಕರಿಸಿದ್ದಳು. ಇದೇ ಕಾರಣಕ್ಕೆ ಸೇಡು ತೀರಿಸಿಕೊಳ್ಳಲು ಕೃತ್ಯವಸೆಗಿರಬಹುದು ಎಂದು ಅಂದಾಜಿಸಲಾಗಿದೆ.
ಹಲ್ಲೆ ಆರೋಪಿ ಯುವಕನ ಓಡಾಟದ ದೃಶ್ಯಗಳು ಸ್ಥಳೀಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿವೆ. ಬನ್ನೇರುಘಟ್ಟ ಠಾಣೆಯಲ್ಲಿ ಕೊಲೆ ಯತ್ನ ಪ್ರಕರಣ ದಾಖಲಾಗಿದ್ದು, ಯುವಕನ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.