ದೊಡ್ಡಬಳ್ಳಾಪುರ (ಬೆಂ.ಗ್ರಾ): ಜ್ಯೋತಿಷಿ ಮಾತು ಕೇಳಿ ಬೀಗ ಹಾಕಿದ ಮನೆಯೊಳಗೆ ಕಳ್ಳರು ಕನ್ನ ಹಾಕಿ ಕನ್ನ ಹಾಕಿ ಲಕ್ಷಾಂತರ ರೂ. ಬೆಲೆಬಾಳುವ ಚಿನ್ನಾಭರಣಗಳನ್ನ ದೋಚಿಕೊಂಡು ಹೋಗಿರುವ ಘಟನೆ ತಾಲೂಕಿನ ಸಿಂಗೇನಹಳ್ಳಿಯಲ್ಲಿ ನಡೆದಿದೆ.
ಗ್ರಾಮದ ಆನಂದ್ ಎಂಬುವರ ತೋಟದ ಮನೆಗೆ ಕನ್ನ ಹಾಕಿರುವ ಕಳ್ಳರು 7.80 ಲಕ್ಷ ಮೌಲ್ಯದ ಚಿನ್ನಾಭರಣ ಕದ್ದೊಯ್ದಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಆನಂದ್ ಅವರ ತಾಯಿ
ಜಯಮ್ಮ ಎಂಬುವರು ಮಾರ್ಚ್ 8ರಂದು ಸಾವನ್ನಪ್ಪಿದ್ದರು. ತಮ್ಮ ತಾಯಿ ಸಾವಿನ ಬಗ್ಗೆ ಜ್ಯೋತಿಷಿಯ ಬಳಿ ಆನಂದ್ ಕೇಳಿಸಿದ್ದಾರೆ. ನಿಮ್ಮ ತಾಯಿ ಮರಣದ ಗಳಿಗೆ ನಿಮಗೆ ಕೆಡಕನ್ನುಂಟು ಮಾಡಲಿದೆ. 3 ತಿಂಗಳು ಮನೆಗೆ ಬೀಗ ಹಾಕಿ ಬೇರೆಡೆ ವಾಸವಾಗಿರಿ ಅಂತ ಆನಂದ್ ಅವರಿಗೆ ಜ್ಯೋತಿಷಿ ಸಲಹೆ ನೀಡಿದ್ದಾನೆ.
3 ತಿಂಗಳು ಮನೆಗೆ ಬೀಗ ಹಾಕಲು ಹೇಳಿದ್ದ ಜ್ಯೋತಿಷಿ
ಜ್ಯೋತಿಷಿ ಮಾತು ಕೇಳಿದ ಆನಂದ್ ಕುಟುಂಬ ಮಾರ್ಚ್ 21ರಂದು ಮನೆಗೆ ಬೀಗ ಹಾಕಿಕೊಂಡು ಅದೇ ಊರಿನಲ್ಲಿದ್ದ ಸಹೋದರಿಯ ಮನೆಯಲ್ಲಿ ವಾಸವಿದ್ದರು. ತಮ್ಮ ಮನೆಯಿಂದ ಎದುರಿಗೆ ಕೇವಲ 50 ಮೀಟರ್ ಅಂತರದಲ್ಲಿ ಸಹೋದರಿಯ ಮನೆಯಿದೆ. ಪ್ರತಿದಿನ ಮನೆಯ ಬಳಿ ಬಂದು ತೋಟದ ಕೆಲಸ ಮಾಡಿ ರಾತ್ರಿ ವೇಳೆಗೆ ಸಹೋದರಿಯ ಮನೆಗೆ ಹೋಗುತ್ತಿದ್ದರು.
ಮಾರ್ಚ್ 31ರ ರಾತ್ರಿ 11 ಗಂಟೆಯವರೆಗೂ ಮನೆಯ ಬಳಿ ಇದ್ದು ಹೋಗಿದ್ದರು. ಆದರೆ, ಮರುದಿನ ಏಪ್ರಿಲ್ 1ರಂದು ಮುಂಜಾನೆ ತಮ್ಮ ಮನೆಯ ಬಳಿ ಬಂದು ನೋಡಿದಾಗ ಮನೆಯ ಬೀಗ ಒಡೆದು ಕಳ್ಳತನ ಮಾಡಿರುವುದು ಬೆಳಕಿಗೆ ಬಂದಿದೆ. ದೊಡ್ಡಬೆಳವಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ಬೆರಳಚ್ಚು ತಜ್ಞರು ಭೇಟಿ ನೀಡಿ ಪರಿಶೀಲಿಸಿದ್ದಾರೆ.
ತಿಳಿದವರೇ ಮಾಡಿದ್ರಾ ಕುತಂತ್ರ..?
3 ತಿಂಗಳು ಮನೆಗೆ ಬೀಗ ಹಾಕಲು ಸಲಹೆ ನೀಡಿದ ಜ್ಯೋತಿಷಿಯ ವಿಚಾರಣೆ ಸಹ ನಡೆಯುತ್ತಿದೆ. ಜಮೀನು ವಿಚಾರಕ್ಕೆ ಸಂಬಂಧಿಗಳೊಂದಿಗೆ ಆನಂದ್ ಜಗಳವಿದೆ. ಇದೇ ವೈಷಮ್ಯದಿಂದ ಕಳ್ಳತನ ಮಾಡಿರುವ ಸಂಶಯವನ್ನೂ ಆನಂದ್ ವ್ಯಕ್ತಪಡಿಸಿದ್ದಾರೆ.
ಒಂಟಿ ಮನೆ ಮತ್ತು ತಿಂಗಳಿನಿಂದ ಮನೆಗೆ ಬೀಗ ಹಾಕಿದ ಸುದ್ದಿ ತಿಳಿದವರೇ ಈ ಕೃತ್ಯ ನಡೆಸಿರುವ ಸಾಧ್ಯತೆ ಇದೆ. ಇತ್ತೀಚೆಗೆ ಸಾಸಲು ಮತ್ತು ದೊಡ್ಡಬೆಳವಂಗಲದಲ್ಲಿ ಕಳ್ಳತನ ಪ್ರಕರಣ ಹೆಚ್ಚಾಗುತ್ತಿವೆ. ಪೊಲೀಸರ ಗಸ್ತು ಹೆಚ್ಚಿಸಬೇಕೆಂಬುದು ಸ್ಥಳೀಯರ ಬೇಡಿಕೆ.
ಇದನ್ನೂ ಓದಿ: ಬೆಂಗಳೂರಲ್ಲಿ ದೆಹಲಿ ಮೂಲದ 'ಕಾನ್ಫರೆನ್ಸ್ ಕಾಲ್' ಕಳ್ಳರ ಬಂಧನ