ನೆಲಮಂಗಲ : ಕಳೆದ ರಾತ್ರಿ 8 ಗಂಟೆ ಸಮಯದಲ್ಲಿ ತೋಟದಲ್ಲಿ ಹೊಂಚು ಹಾಕಿ ಕಾಯುತ್ತಿದ್ದ ಚಿರತೆಯೊಂದು ನಾಯಿ ಮರಿಯನ್ನು, ಚಿರತೆ ಹೊತ್ತೊಯ್ದ ಘಟನೆ ನೆಲಮಂಗಲ ತಾಲೂಕಿನ ದಾಬಸ್ ಪೇಟೆ ಬಳಿಯ ಘೊಟ್ಟಿಕೆರೆ ಕ್ರಾಸ್ನ ಭರತ್ ಎಂಬುವರ ತೋಟದಲ್ಲಿ ನಡೆದಿದೆ. ಈ ನಾಯಿ ಮರಿ ತೆಗೆದುಕೊಂಡು ಹೋಗುತ್ತಿರುವ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಭರತ್ ತಮ್ಮ ತೋಟದಲ್ಲಿ ಮೂರು ನಾಯಿ ಮರಿಗಳನ್ನ ಸಾಕಿಕೊಂಡಿದ್ದರು. ನಿನ್ನೆ ಕೆಲಸದ ನಿಮಿತ್ತ ಹೊರಗೆ ಹೋಗಿದ್ದ ಅವರು, ತೋಟಕ್ಕೆ ವಾಪಸ್ ಬಂದ ನಂತರ ನಾಯಿ ಮರಿಗಳಿಗೆ ಊಟ ಹಾಕಲು ಹೋಗಿದ್ದಾರೆ. ಈ ವೇಳೆ ಒಂದು ಮರಿ ಕಾಣಿಸಿಲ್ಲ, ತಕ್ಷಣವೇ ಅವರು ಸಿಸಿ ಕ್ಯಾಮರಾ ಪರಿಶೀಲನೆ ಮಾಡಿದ್ದಾಗ, ಚಿರತೆ ನಾಯಿ ಮರಿಯನ್ನು ಹೊತ್ತೊಕೊಂಡು ಹೋಗುತ್ತಿರುವುದು ಗೊತ್ತಾಗಿದೆ. ಶಿವಗಂಗೆ ಸುತ್ತಮುತ್ತ ಚಿರತೆ ಉಪಟಳ ಹೆಚ್ಚಾಗಿದ್ದು, ಹೆಚ್ಚಾಗಿ ತೋಟದ ಮನೆಗಳ ಮೇಲೆ ಚಿರತೆ ದಾಳಿ ನಡೆಸುತ್ತಿರುವುದರಿಂದ ತೋಟದಲ್ಲಿ ವಾಸಿಸುವವರ ಆತಂಕಕ್ಕೆ ಕಾರಣವಾಗಿದೆ.
ಚಿರತೆ ಆತಂಕದಲ್ಲಿ ಕಾರ್ಮಿಕರು : ಇನ್ನೊಂದೆಡೆ, ದೊಡ್ಡಬಳ್ಳಾಪುರದ ಅಪೇರಲ್ ಪಾರ್ಕ್ ಮತ್ತು ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಚಿರತೆ ಪ್ರತ್ಯಕ್ಷವಾಗಿರುವುದು ಕಾರ್ಮಿಕರ ಆತಂಕಕ್ಕೆ ಕಾರಣವಾಗಿದೆ. ಕೈಗಾರಿಕಾ ಪ್ರದೇಶಗಳಲ್ಲಿ ರಾತ್ರಿ ವೇಳೆ ಬೀದಿ ದೀಪಗಳ ವ್ಯವಸ್ಥೆ ಇಲ್ಲದೇ ಕಾರ್ಮಿಕರು ಒಂಟಿಯಾಗಿ ಓಡಾಡುವುದಕ್ಕೆ ಹೆದರುತ್ತಿದ್ದರು, ಈಗ ಚಿರತೆ ಕಾಣಿಸಿಕೊಂಡಿರುವುದು ಕಾರ್ಮಿಕರ ಆತಂಕವನ್ನು ಮತ್ತಷ್ಟು ಹೆಚ್ಚು ಮಾಡಿದೆ.
ದೊಡ್ಡಬಳ್ಳಾಪುರ ತಾಲೂಕಿನ ಅರೇಹಳ್ಳಿ - ಗುಡ್ಡದಹಳ್ಳಿ ಬಳಿ ಇರುವ ಅಪೇರಲ್ ಪಾರ್ಕ್ ಹಾಗೂ ಅಜಾಕ್ಸ್ ಕಂಪನಿ ಮುಂಭಾಗ ಚಿರತೆಯೊಂದು ಓಡಾಡುವ ದೃಶ್ಯ ಕಂಡು ಬಂದಿದ್ದು ಸ್ಥಳೀಯರ ಆತಂಕಕ್ಕೆ ಕಾರಣವಾಗಿದೆ. ಈ ಪ್ರದೇಶದಲ್ಲಿ ಸಾವಿರಾರು ಕಾರ್ಮಿಕರು ಕೆಲಸ ಮಾಡುತ್ತಾರೆ. ಹೀಗಾಗಿ, ಆದಷ್ಟುಬೇಗ ಚಿರತೆ ಸೆರೆ ಹಿಡಿಯುವಂತೆ ಸ್ಥಳೀಯರು ಮನವಿ ಮಾಡಿದ್ದಾರೆ.
ಇದನ್ನೂ ಓದಿ : ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶದ ಬಳಿ ಚಿರತೆ ಪ್ರತ್ಯಕ್ಷ : ವಿಡಿಯೋ
ಇನ್ನು ಇತ್ತೀಚೆಗೆ ದೊಡ್ಡಬಳ್ಳಾಪುರ ನಗರದ ಹೊರವಲಯದಲ್ಲಿರುವ ವೀರಾಪುರ ಗ್ರಾಮದ ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶದ ಬಳಿಯ ವೀರಾಪುರ ಗ್ರಾಮದಲ್ಲೂ ಸಹ ಚಿರತೆ ಕಾಣಿಸಿಕೊಂಡಿತ್ತು. ಗ್ರಾಮದ ರಾಮಮೂರ್ತಿ ಎಂಬುವರ ಮನೆಯಂಗಳದಲ್ಲಿ ಚಿರತೆ ಒಡಾಡಿದ ದೃಶ್ಯಗಳು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿತ್ತು. ಮಧ್ಯರಾತ್ರಿ ಸುಮಾರು 12 ಗಂಟೆ ಸಮಯದಲ್ಲಿ ಮನೆ ಮುಂದಿನ ಅಡಕೆ ತೋಟದಲ್ಲಿ ಚಿರತೆ ಓಡಾಡಿದ ದೃಶ್ಯ ಸೆರೆಯಾಗಿತ್ತು.