ದೊಡ್ಡಬಳ್ಳಾಪುರ : ಒಂದೇ ರಾತ್ರಿ 10 ಜನರಿಗೆ ಆಪರೇಷನ್ ಮಾಡಿ ದಾಖಲೆ ಬರೆದ ಖ್ಯಾತ ಸರ್ಜನ್ ಡಾ. ಆಂಜನಪ್ಪರವರಿಗೆ ರಾಜ್ಯೋತ್ಸವ ಪುರಸ್ಕಾರ ಸಿಕ್ಕ ಹಿನ್ನೆಲೆ, ಗ್ರಾಮದ ಹೆಮ್ಮೆಯ ಪುತ್ರನಿಗೆ ಸ್ವಂತ ಊರಿನ ಜನತೆ ಅದ್ಧೂರಿ ಮೆರವಣಿಗೆ ಮಾಡಿ ಅಭಿನಂದನೆ ಸಲ್ಲಿಸಿದರು.
ಕಾರ್ಯಕ್ರಮದ ಹಿನ್ನೆಲೆ ದೊಡ್ಡಬಳ್ಳಾಪುರ ತಾಲೂಕಿನ ದೊಡ್ಡ ತುಮಕೂರು ಗ್ರಾಮ ಕನ್ನಡಹಬ್ಬಕ್ಕೆ ಸಿದ್ಧಗೊಂಡಂತಿತ್ತು. ಗ್ರಾಮದ ಮೂಲೆ ಮೂಲೆಯಲ್ಲೂ ಕನ್ನಡದ ಬಾವುಟ ಹಾರಾಡುತ್ತಿದ್ದವು. ರಾಜ್ಯದಲ್ಲಿ ತಮ್ಮೂರಿನ ಕೀರ್ತಿ ಬೆಳುಗುವಂತೆ ಮಾಡಿದ ಡಾಕ್ಟರ್ನ್ನು ಅಶ್ವರೂಢ ಅಲಂಕೃತ ವಾಹನದ ಮೂಲಕ ಗ್ರಾಮದಲ್ಲಿ ಮೆರವಣಿಗೆ ಮಾಡಲಾಯಿತು. ಮೆರವಣಿಗೆಯಲ್ಲಿ ಶಾಲಾ ಮಕ್ಕಳು, ಗ್ರಾಮಸ್ಥರು ಹೆಜ್ಜೆಹಾಕಿದರು. ಮೆರವಣಿಗೆಯಲ್ಲಿ ಸಾಗಿದ ವೀರೆಗಾಸೆ ಕುಣಿತ ಎಲ್ಲರನ್ನು ಆಕರ್ಷಿಸಿತು. ಗ್ರಾಮಸ್ಥರಿಂದ ಅಭಿನಂದನೆ ಸ್ವೀಕರಿಸಿದ ಡಾ. ಆಂಜನಪ್ಪ, ಗ್ರಾಮದ ಜನರ ಪ್ರೀತಿ ಗೌರವಕ್ಕೆ ತಲೆಬಾಗಿ, ಸುತ್ತಮುತ್ತಲಿನ ಗ್ರಾಮಸ್ಥರಿಗೆ ನೆರವಾಗಲು ಆಸ್ಪತ್ರೆ ಕಟ್ಪಿಸುವುದಾಗಿ ಹೇಳಿದರು.
ಉದರ ಸರ್ಜನ್ ಆಗಿ ಖ್ಯಾತಿಗಳಿಸಿರುವ ಡಾ.ಆಂಜನಪ್ಪ, ಸಾವಿರಾರು ಅಪರೇಷನ್ ಮಾಡಿದ್ದಾರೆ. ತಮ್ಮದೇ ಊರಿನ 150 ಜನರಿಗೆ ಅಪರೇಷನ್ ಮಾಡಿ ಮರುಜನ್ಮ ನೀಡಿದ್ದಾರೆ. 1987 ರಲ್ಲಿ ಬೋರಿಂಗ್ ಆಸ್ಪತ್ರೆಯಲ್ಲಿ ಒಂದೇ ರಾತ್ರಿ 10 ಜನರಿಗೆ ಅಪರೇಷನ್ ಮಾಡಿದ ಖ್ಯಾತಿ ಅವರಿಗಿದೆ. ಮಹಿಳೆಯೊಬ್ಬರ ಹೊಟ್ಟೆಯಿಂದ ಆಪರೇಷನ್ ಮೂಲಕ 23 ಕೆಜಿ ಟ್ಯೂಮರ್ ತೆಗೆದ ದಾಖಲೆ ಸಹ ಅವರ ಹೆಸರಲ್ಲಿದೆ.