ನೆಲಮಂಗಲ: ತಾಲೂಕಿನ ಸೋಂಪುರ ಹೋಬಳಿಯ ರಾಯರಪಾಳ್ಯ ಗ್ರಾಮದ ಇಟ್ಟಿಗೆ ಕಾರ್ಖಾನೆಯೊಂದರಲ್ಲಿ ಬೃಹತ್ ಗಾತ್ರದ ಹೆಬ್ಬಾವು ಕಾಣಿಸಿಕೊಂಡಿದೆ. 8 ಅಡಿ ಉದ್ದದ ಹೆಬ್ಬಾವು ಇದಾಗಿದ್ದು, ಉರಗ ರಕ್ಷಕರ ತಂಡ ರಕ್ಷಣೆ ಮಾಡಿ ಕಾಡಿಗೆ ಬಿಟ್ಟಿದೆ. ಆಹಾರ ಹುಡುಕಿಕೊಂಡು ಬಂದ ಈ ಹೆಬ್ಬಾವು, ಪ್ರತಾಪ್ ಎಂಬುವರಿಗೆ ಸೇರಿದ ಎಸ್ಆರ್ಎಸ್ ಇಟ್ಟಿಗೆ ಕಾರ್ಖಾನೆಯಲ್ಲಿ ಅಡಗಿಕೊಂಡಿತ್ತು. ಇದನ್ನು ಕಂಡ ಅಲ್ಲಿಯ ಸಿಬ್ಬಂದಿ, ಮಾಲೀಕರಿಗೆ ಮಾಹಿತಿ ನೀಡಿದ್ದರು. ಮಾಲೀಕರ ಮಾಹಿತಿ ಮೇರೆಗೆ ಸ್ಥಳಕ್ಕೆ ಬಂದ ತುಮಕೂರಿನ ಉರಗ ರಕ್ಷಕ ಶ್ಯಾಮ್ ಮತ್ತು ಅವರ ತಂಡ ಹೆಬ್ಬಾವನ್ನು ರಕ್ಷಣೆ ಮಾಡಿದೆ. ಸುರಕ್ಷಿತವಾಗಿ ಹಿಡಿದ ತಂಡ, ಬಳಿಕ ತುಮಕೂರಿನ ದೇವರಾಯನದುರ್ಗ ಬೆಟ್ಟದಲ್ಲಿ ಬಿಟ್ಟಿದೆ.
8 ಅಡಿ ಗಾತ್ರದ ಹೆಬ್ಬಾವೊಂದು ಶುಕ್ರವಾರ ಸಂಜೆ ಇಟ್ಟಿಗೆ ಕಾರ್ಖಾನೆಗೆ ನುಗ್ಗಿತ್ತು. ಅಡಗಿ ಕುಳಿತಿದ್ದನ್ನು ನೋಡಿ ನಮ್ಮ ಕಾರ್ಖಾನೆ ಹುಡುಗರು ಮಾಹಿತಿ ನೀಡಿದರು. ಬಂದು ನೋಡಿದಾಗ ಹೆಬ್ಬಾವು ಮಲಗಿತ್ತು. ಎಷ್ಟು ಪ್ರಯತ್ನ ಮಾಡಿದರೂ ತಾನಿರುವ ಜಾಗದಿಂದ ಅದು ಕದಲಲೇ ಇಲ್ಲ. ಬಳಿಕ ಉರಗ ರಕ್ಷಕ ಶ್ಯಾಂ ಅವರನ್ನು ಕರೆಸಿದೆವು. ಸ್ಥಳಕ್ಕೆ ಬಂದ ಶ್ಯಾಮ್ ಅವರ ತಂಡ, ಸುರಕ್ಷಿತವಾಗಿ ಹಿಡಿದು ಕಾಡಿಗೆ ಬಿಟ್ಟಿತು. ಆದರೆ, ಇತ್ತೀಚೆಗೆ ಇಂತಹ ಹಾವು ಸೇರಿದಂತೆ ಹಲವು ಬಗೆಯ ಕಾಡು ಪ್ರಾಣಿಗಳು ಕಾಡಿನಿಂದ ನಾಡಿನತ್ತ ಬರುವುದು ಹೆಚ್ಚಾಗಿದೆ. ಅವುಗಳಿಗೆ ತೊಂದರೆ ಕೊಡದೆ ಪ್ರಾಣಿ ರಕ್ಷಕರ ಸಹಾಯ ಪಡೆದು ಅವುಗಳನ್ನು ಮತ್ತೆ ಕಾಡಿಗೆ ಬಿಡುವ ಕೆಲಸ ಮಾಡಬೇಕೆ ಎಂದು ಪ್ರತಾಪ್ ಮನವಿ ಮಾಡಿಕೊಂಡಿದ್ದಾರೆ.
ಕಾರ್ಖಾನೆಯಲ್ಲಿದ್ದ ನಾಯಿಯೊಂದು ಮರಿಗಳನ್ನು ಹಾಕಿದ್ದು, ಮರಿ ತಿನ್ನಲು ಈ ಹೆಬ್ಬಾವು ಇಟ್ಟಿಗೆ ಕಾರ್ಖಾನೆ ಬಂದಿರಬಹುದು. ಅಪರೂಪದ ಹೆಬ್ಬಾವು ಕಂಡು ಸ್ಥಳೀಯರು ಕೂಡ ಅಚ್ಚರಿ ವ್ಯಕ್ತಪಡಿಸಿದರು. ಕಳೆದ ವರ್ಷವು ಕೂಡ ಇಟ್ಟಿಗೆ ಕಾರ್ಖಾನೆ ಪಕ್ಕದ ರಾಮದೇವರ ಬೆಟ್ಟದಲ್ಲಿ ಹೆಬ್ಬಾವು ಕಂಡಿತ್ತು ಎಂದು ಪ್ರತಾಪ್ ಅಚ್ಚರಿ ಹೊರಹಾಕಿದ್ದಾರೆ.
ಹೆಬ್ಬಾವು ರಕ್ಷಣೆಯ ಬಗ್ಗೆ ಪ್ರತಿಕ್ರಿಯೆ ನೀಡಿದ ಸ್ನೇಕ್ ಶ್ಯಾಮ್, ಬಯಲು ಸೀಮೆ ಪ್ರಾಂತ್ಯದಲ್ಲಿ ಹೆಬ್ಬಾವು ಕಾಣಿಸುವುದು ಅಪರೂಪ. ಕಾರ್ಖಾನೆ ಪಕ್ಕದ ರಾಮದೇವರ ಬೆಟ್ಟದಲ್ಲಿ ಈ ಹಾವು ವಾಸವಾಗಿರಬಹುದು. ಕಳೆದ 10 ವರ್ಷಗಳಿಂದ ಉರಗ ರಕ್ಷಣೆ ಮಾಡುತ್ತಿದ್ದೇವೆ. ನಮ್ಮ ತಂಡದಿಂದ ಈಗಾಗಲೇ 20ಕ್ಕೂ ಅಧಿಕ ಹೆಬ್ಬಾವು ರಕ್ಷಿಸಿದ್ದೇವೆ. ವರ್ಕಾಂ ಎಂಬ ಎನ್.ಜಿ.ಓ ಅಡಿ ಉರಗ ರಕ್ಷಣೆ ಮಾಡುತ್ತಿದ್ದೇವೆ. ಆತಂಕ ಪಡದೇ ಎಚ್ಚರಿಕೆಯಿಂದ ಇದ್ದರೇ, ಹಾವುಗಳನ್ನು ಸಂರಕ್ಷಿಸಬಹುದು ಎಂದರು.
ಇದನ್ನೂ ಓದಿ: ವಿಮಾನ ನಿಲ್ದಾಣದಲ್ಲಿ ವಿದೇಶಿಯ 2 ಹಾವು, 9 ಹೆಬ್ಬಾವುಗಳ ಪತ್ತೆ, ಬೆಚ್ಚಿಬಿದ್ದ ಅಧಿಕಾರಿಗಳು