ಆನೇಕಲ್(ಬೆಂಗಳೂರು ಗ್ರಾಮಾಂತರ): ಫೆಲಿನ್ ಪ್ಯಾನ್ಲೂಕೋಪೇನಿಯಾ ವೈರಸ್ ತಗುಲಿ ಬನ್ನೇರುಘಟ್ಟ ಜೈವಿಕ ಉದ್ಯಾನದ 3ರಿಂದ 10 ತಿಂಗಳ ವಯೋಮಾನದ ಏಳು ಚಿರತೆ ಮರಿಗಳು ಮೃತಪಟ್ಟಿವೆ ಎಂದು ಕಾರ್ಯನಿರ್ವಾಹಕ ಅಧಿಕಾರಿ ಸೂರ್ಯ ಸೇನ್ ತಿಳಿಸಿದ್ದಾರೆ. ಆಗಸ್ಟ್ 22ರಂದು ಉದ್ಯಾನದ ಚಿರತೆ ಮರಿಗಳಲ್ಲಿ ಮೊದಲ ಬಾರಿಗೆ ಸೋಂಕು ಕಾಣಿಸಿಕೊಂಡಿತ್ತು. ಇದು ಬೆಕ್ಕುಗಳಲ್ಲಿ ಕಾಣಿಸಿಕೊಳ್ಳುವ ಮಾರಕ ರೋಗವಾಗಿದೆ.
ಈ ಸೋಂಕು ತಗುಲಿದ ಬಳಿಕ ಜೀರ್ಣ ಕ್ರಿಯೆ ಆಗದೆ, ಬಿಳಿ ರಕ್ತಕಣಗಳು ಕಡಿಮೆಯಾಗಿ ರಕ್ತ ವಾಂತಿ- ಬೇದಿ ಆಗುತ್ತದೆ. ಬಳಿಕ ಒಂದೆರಡು ದಿನದಲ್ಲಿ ನಿತ್ರಾಣಗೊಂಡು ಚಿರತೆಗಳು ಸಾವನ್ನಪ್ಪುತ್ತವೆ. ಇತ್ತೀಚೆಗೆ ಬಿಳಿಗಿರಿ ರಂಗನಬೆಟ್ಟ, ಮೈಸೂರು ಮೃಗಾಲಯ ಮತ್ತು ಮದ್ದೂರಿನಿಂದ 11 ಚಿರತೆ ಮರಿಗಳನ್ನು ಬನ್ನೇರುಘಟ್ಟ ಜೈವಿಕ ಉದ್ಯಾನಕ್ಕೆ ಕರೆತರಲಾಗಿತ್ತು. ಇವುಗಳನ್ನು ಪುನರ್ವಸತಿ ಕೇಂದ್ರದಲ್ಲಿರಿಸಿ ವೈದ್ಯರ ಸಲಹೆಯ ಮೇರೆಗೆ ಪ್ರಾಣಿಪಾಲಕರು ಆರೈಕೆ ಮಾಡುತ್ತಿದ್ದರು.
ಆಗಸ್ಟ್ 22 ರಿಂದ ಸೆಪ್ಟೆಂಬರ್ 5ರ ಅವಧಿಯಲ್ಲಿ 7 ಚಿರತೆ ಮರಿಗಳು ಸಾವು: ಈ ಸೋಂಕಿನಿಂದ ಇತರೆ ಜೀವಿಗಳನ್ನು ರಕ್ಷಿಸಲು ಅಗತ್ಯ ಕ್ರಮಗಳನ್ನು ವೈದ್ಯರು ತೆಗೆದುಕೊಂಡಿದ್ದರು. ಆದರೂ ಆಗಸ್ಟ್ 22 ರಿಂದ ಸೆಪ್ಟೆಂಬರ್ 5ರ ಅವಧಿಯಲ್ಲಿ 7 ಚಿರತೆ ಮರಿಗಳು ಚಿಕಿತ್ಸೆಗೆ ಸ್ಪಂದಿಸದೆ ಸಾವನ್ನಪ್ಪಿವೆ ಎಂದು ಬನ್ನೇರುಘಟ್ಟ ಜೈವಿಕ ಉದ್ಯಾನವನ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಇನ್ನೂ 11 ಪ್ರಾಣಿಗಳಿಗೆ ಸೋಂಕು ಹರಡಿರುವ ಬಗ್ಗೆ ಮಾಹಿತಿ ದೊರಕಿದ್ದು, ಅವುಗಳಲ್ಲಿ ಒಂದಾದ 8 ತಿಂಗಳ ಸಿಂಹದ ಮರಿ ಚೇತರಿಸಿಕೊಂಡಿದೆ. ಸೋಂಕಿತ ಪ್ರಾಣಿಗಳೊಂದಿಗೆ ಒಡನಾಟ ಹೊಂದಿರುವ ಪ್ರಾಣಿಪಾಲಕರನ್ನು ಬೇರೆಡೆಗೆ ತೆರಳದಂತೆ ಸೂಚಿಸಿ ಇತರೆ ಪ್ರಾಣಿಗಳು ಸೋಂಕಿಗೆ ಒಳಗಾಗದಂತೆ ನೋಡಿಕೊಳ್ಳಲಾಗಿದೆ ಎಂದು ಕಾರ್ಯ ನಿರ್ವಾಹಕ ಅಧಿಕಾರಿ ಸೂರ್ಯ ಸೇನ್ ತಿಳಿಸಿದ್ದಾರೆ.
ಸೋಂಕು ಹರಡದಂತೆ ಉದ್ಯಾನವನದಲ್ಲಿ ಹೈ ಅಲರ್ಟ್: ಉದ್ಯಾನದಲ್ಲಿ ರೋಗಹರಡದಂತೆ ಉದ್ಯಾನದಲ್ಲಿ ಸ್ವಚ್ಛತೆಗೆ ಹೆಚ್ಚಿನ ಒತ್ತು ನೀಡಲಾಗಿದ್ದು, ಎಲ್ಲೆಡೆ ಬ್ಲಿಚೀಂಗ್ ಪೌಡರ್ ಸಿಂಪಡಿಸಲಾಗಿದೆ. ಇನ್ನೂ 80 ಚಿರತೆಗಳು ಉದ್ಯಾನದಲ್ಲಿವೆ. ಹೊಸ ಚಿರತೆ ಸಫಾರಿಯಲ್ಲಿ 9 ಚಿರತೆಗಳನ್ನು ಬಿಡಲಾಗಿದ್ದು, ಅವುಗಳಲ್ಲಿ 3 ಸಾವನ್ನಪ್ಪಿದ್ದರೆ ಬಿಳಿಗಿರಿ ರಂಗನಬೆಟ್ಟ, ಮದ್ದೂರು, ಮೈಸೂರು ಮೃಗಾಲಯದಿಂದ ಸಂರಕ್ಷಿಸಿ ತರಲಾಗಿದ್ದ 4 ಮರಿಗಳು ಸಾವನ್ನಪ್ಪಿವೆ. ಸೋಂಕು ಹರಡಬಹುದಾದ ಹುಲಿ-ಸಿಂಹಗಳಿಗೆ ಮುನ್ನೆಚ್ಚರಿಕೆಯಾಗಿ ಬೂಸ್ಟರ್ ಡೋಸ್ ಲಸಿಕೆ ನೀಡಲಾಗಿದ್ದು, ಸಾಕಷ್ಟು ಎಚ್ಚರಿಕೆಯಿಂದ ಪ್ರಾಣಿಗಳ ಮೇಲೆ ನಿಗಾ ವಹಿಸಲಾಗಿದೆ. ಎಲ್ಲಾ ಕೇಜ್‌ಗಳಲ್ಲಿ ವೈರಸ್ ನಾಶವಾಗಲು ಬರ್ನಿಂಗ್ ಮಾಡಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಮೈಸೂರು: ಗೌರಿ ಗಣೇಶ ಹಬ್ಬದ ಪ್ರಯುಕ್ತ ಗಜಪಡೆಗೆ ಅರಮನೆ ಆವರಣದಲ್ಲಿ ವಿಶೇಷ ಪೂಜೆ