ಬೆಂಗಳೂರು: ಲಾಲ್‌ಬಾಗ್‌ನಲ್ಲಿ ಗಿಡ ಮರಗಳಿಗೆ ನೀರುಣಿಸುವ ಜೊತೆಗೆ ಇಡೀ ಪರಿಸರಕ್ಕೆ ಜೀವಕಳೆ ನೀಡಲು ತೋಟಗಾರಿಕೆ ಇಲಾಖೆ ಮುಂದಾಗಿದೆ. ಉದ್ಯಾನದಲ್ಲಿ ಇಳಿಜಾರು ಪ್ರದೇಶದಲ್ಲಿ ಇಂಗು ಗುಂಡಿ ನಿರ್ಮಿಸಿ ಅಂತರ್ಜಲ ಸಂರಕ್ಷಣೆ ಮಾಡುವ ಮೂಲಕ ಉದ್ಯಾನವನದ ಸಂಪೂರ್ಣ ವಾತಾವರಣ ತಂಪಾಗಿಸಲು ತೋಟಗಾರಿಕೆ ಇಲಾಖೆ ನಿರ್ಧಾರ ಕೈಗೊಂಡಿದೆ.
ಲಾಲ್‌ಬಾಗ್ 240 ಎಕರೆ ಇದ್ದು, ಉತ್ತರ ಭಾಗ ಇಳಿಜಾರು ಪ್ರದೇಶದಿಂದ ಕೂಡಿದೆ. ಮಳೆ ಬಂದಂತಹ ಸಂದರ್ಭದಲ್ಲಿ ದಕ್ಷಿಣ ಭಾಗದಿಂದ ಹರಿದು ಬಂದ ನೀರು ಉತ್ತರ ಭಾಗದಲ್ಲಿ ಶೇಖರಣೆಯಾಗದೆ ಕಾಲುವೆಗಳ ಮುಖಾಂತರ ಹರಿದು ಅಪಾರವಾದ ನೀರು ಪೋಲಾಗುತ್ತಿತ್ತು. ಇದನ್ನು ತಡೆಗಟ್ಟಲು ತೋಟಗಾರಿಕೆ ಇಲಾಖೆ ನೀರು ಪೋಲಾಗುವುದನ್ನ ನಿಯಂತ್ರಿಸಲು ಮಳೆ ನೀರು ಸಂಗ್ರಹಿಸುವ ಸಮಗ್ರ ಅಭಿವೃದ್ಧಿ ಯೋಜನೆ ಕೈಗೆತ್ತಿಕೊಂಡಿದೆ.
ಈ ಯೋಜನೆ ಅನುಷ್ಠಾನಗೊಳಿಸಲು ಯುನೈಟೆಡ್ ವೇ ಆಫ್ ಬೆಂಗಳೂರು ಹಾಗೂ ಬಾಷ್ ಕಂಪನಿಗಳ ಪ್ರಾಯೋಜಕತ್ವದ ಅಡಿ ಲಾಲ್‌ಬಾಗ್ ಆವರಣದಲ್ಲಿ 18X3 ಅಡಿ ಅಳತೆಯ ಒಟ್ಟು 124 ಗುಂಡಿಗಳನ್ನು ನಿರ್ಮಿಸಲಾಗಿದೆ. ಪ್ರತಿ ಗುಂಡಿಯಿಂದ 3600 ಲೀಟರ್ ನೀರನ್ನು ಸಂಗ್ರಹಿಸಬಹುದಾಗಿದೆ. ಒಟ್ಟು 124 ಇಂಗು ಗುಂಡಿಗಳಿಂದ ಸುಮಾರು 4.46 ಲಕ್ಷ ಲೀಟರ್ ನೀರು ಸಂಗ್ರಹಿಸಬಹುದಾಗಿದೆ. ಮುಂದುವರೆದು ತೋಟಗಾರಿಕೆ ಇಲಾಖೆಯಿಂದ 12X4 ಅಡಿ ಅಳತೆಯ 85 ಇಂಗು ಗುಂಡಿಗಳನ್ನು ನಿರ್ಮಿಸಿದ್ದು, ಪ್ರತಿ ಗುಂಡಿಯಿಂದ 4268 ಲೀಟರ್ ಮಳೆ ನೀರು ಸಂಗ್ರಹಿಸಬಹುದಾಗಿದೆ. ಒಟ್ಟು 85 ಇಂಗು ಗುಂಡಿಗಳಿಂದ 3.62 ಲಕ್ಷ ಲೀಟರ್ ನೀರು ಸಂಗ್ರಹಿಸಬಹುದಾಗಿದೆ.
ಪ್ರಸ್ತುತ ಲಾಲ್‌ಬಾಗ್‌ನಲ್ಲಿ 209 ಇಂಗು ಗುಂಡಿಗಳು ನಿರ್ಮಾಣವಾಗಿದ್ದು, ಸುಮಾರು 2 ಕೋಟಿ ಲೀಟರ್ ನೀರನ್ನು ಭೂಮಿಗೆ ಇಂಗಿಸಲಾಗುತ್ತಿದೆ. ಇದರಿಂದ ಅಂತರ್ಜಲ ಮಟ್ಟ ಗಣನೀಯವಾಗಿ ಏರಿಕೆಯಾಗಲಿದ್ದು, ಸಸ್ಯ ತೋಟದ ಸಸ್ಯ ಪ್ರಬೇಧಗಳು ಹಾಗೂ ಬೃಹತ್ ವೃಕ್ಷಗಳಿಗೆ ಸಹಕಾರಿಯಾಗಲಿದೆ. ಜೊತೆಗೆ ಇವುಗಳಿಂದ ಅತಿಯಾದ ಮಳೆ ಬಿದ್ದ ವೇಳೆ ಸಹಜವಾಗಿ ಉಂಟಾಗುತ್ತಿದ್ದ ನೀರಿನ ಹರಿವು ಮತ್ತು ಭೂ ಸವೆತವನ್ನು ನಿಯಂತ್ರಿಸಲು ಹೆಚ್ಚು ಸಹಕಾರಿಯಾಗಲಿದೆ.
ಇನ್ನು ಮುಂಬರುವ ಬೇಸಿಗೆಗೂ ಇದೇ ನೀರನ್ನ ಬಳಸಬಹುದಾಗಿದೆ. ಎಲ್ಲಾ ಇಂಗು ಗುಂಡಿ ಕಾಮಗಾರಿ ಪೂರ್ಣಗೊಂಡಿದ್ದು, ಲಾಲ್‌ಬಾಗ್ ನಿರ್ದೇಶಕಿ ಫೌಸಿಯಾ ತರನಂ ಇಂಗು ಗುಂಡಿಗಳನ್ನು ವೀಕ್ಷಿಸಿದರು. ಈ ವೇಳೆ ಮಾತನಾಡಿದ ಅವರು, ಲಾಲ್‌ಬಾಗ್‌ನಲ್ಲಿ ಇಂತಹ ಯೋಜನೆ ಪೂರ್ಣಗೊಂಡಿದ್ದು ಖುಷಿಯ ಸಂಗತಿ. ಪರಿಸರಕ್ಕೆ ಒಳಿತಾಗುವ ಕಾರ್ಯಗಳು ಆಗುತ್ತಿರಬೇಕು. ಇನ್ನು ಇಂಗು ಗುಂಡಿಗಳ ಕುರಿತು ಜನರಲ್ಲಿ ಅರಿವು ಮೂಡಿಸಬೇಕು. ಹೀಗಾಗಿ ನಮ್ಮಿಂದ ಶುರುವಾಗಲಿ, ಮುಂಬರುವ ದಿನಗಳಲ್ಲಿ ಶಾಲಾ ಮಕ್ಕಳಿಗಂತಲೇ ಪ್ರತ್ಯೇಕವಾಗಿ ನೀರಿನ ಸಂರಕ್ಷಣೆ ಕುರಿತು ಕಾರ್ಯಕ್ರಮ ನಡೆಸುವ ಯೋಜನೆ ಇದೆ ಎಂದು ಹೇಳಿದರು.
ಓದಿ...ಏರ್ ಇಂಡಿಯಾ ಭರ್ಜರಿ ಆಫರ್:ವಿಮಾನ ಟಿಕೆಟ್ ಮೇಲೆ ಶೇ 50ರಷ್ಟು ರಿಯಾಯಿತಿ..!