ದೇವನಹಳ್ಳಿ: ಅತಿ ಹೆಚ್ಚು ಸೋಂಕಿತರಿರುವ ನ್ಯೂಯಾರ್ಕ್ನಿಂದ 200 ಕನ್ನಡಿಗರು ದೇವನಹಳ್ಳಿಯ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ್ದಾರೆ. ವಂದೇ ಭಾರತ್ ಮಿಷನ್ ಅಡಿಯಲ್ಲಿ ತಾಯ್ನಾಡಿಗೆ ಆಗಮಿಸಿದ ಕನ್ನಡಿಗರು, ಏರ್ ಪೋರ್ಟ್ ನಲ್ಲಿ ತಮ್ಮ ಸಂಬಂಧಿಕರನ್ನ ನೋಡಿ ಸಂತಸಪಟ್ಟರು.
ನ್ಯೂಯಾರ್ಕ್ ನಗರದಲ್ಲಿ ಸಿಲುಕಿದ್ದ ಅನಿವಾಸಿ ಭಾರತೀಯರನ್ನು ಭಾರತಕ್ಕೆ ಕರೆತರಲಾಗಿದೆ. ಒಟ್ಟಾರೆ 211 ಪ್ರಯಾಣಿಕರು ಭಾರತಕ್ಕೆ ಆಗಮಿಸಿದ್ದು, ನ್ಯೂಯಾರ್ಕ್ ನಿಂದ ಹೊರಟ ವಿಮಾನ ಮೊದಲಿಗೆ ದೆಹಲಿಯಲ್ಲಿ ಲ್ಯಾಂಡ್ ಆಗಿ ಅಲ್ಲಿ 11 ಪ್ರಯಾಣಿಕರು ಇಳಿದಿದ್ದಾರೆ. ಇನ್ನುಳಿದ 200 ಪ್ರಯಾಣಿಕರು ಬೆಂಗಳೂರಿಗೆ ಬಂದಿಳಿದಿದ್ದಾರೆ.
ಕೆಐಎಎಲ್ಗೆ ಆಗಮಿಸಿದ ಪ್ರಯಾಣಿಕರಿಗೆ ನುರಿತ ವೈದ್ಯರ ತಂಡದಿಂದ ಥರ್ಮಲ್ ಸ್ಕ್ರೀನಿಂಗ್ ಮಾಡಲಾಯಿತು. ಅನಂತರ ಅವರವರ ಆಯ್ಕೆಯ ಹೋಟೆಲ್ ಗಳಲ್ಲಿ ಕ್ವಾರಂಟೈನ್ ಮಾಡಲು ಕಳಿಸಲಾಯಿತು.
ನ್ಯೂಯಾರ್ಕ್ ನಿಂದ ಆಗಮಿಸಿದ ವೈದ್ಯ ಡಾ.ಆನಂದ್ ತಾಯ್ನಾಡಿಗೆ ಮರಳಿದ್ದರ ಬಗ್ಗೆ ಖುಷಿ ಪಟ್ಟರು. ಅಮೆರಿಕದ ವ್ಯವಸ್ಥೆ ಕಠಿಣವಾಗಿದೆ ಆದರೂ ಅಮೆರಿಕದಲ್ಲಿ ಸೇಫ್ ಝೋನ್ ಇದೆ. ಇಲ್ಲಿನ ಏರ್ ಪೋರ್ಟ್ ಸಿಬ್ಬಂದಿ ಉತ್ತಮ ಕೆಲಸ ಮಾಡುತ್ತಿದ್ದಾರೆ. ಪ್ರಯಾಣಿಕರಿಗೆ ಸೂಕ್ತ ರೀತಿಯಲ್ಲಿ ಮಾರ್ಗದರ್ಶನ ನೀಡುತ್ತಿದ್ದಾರೆ. ಪ್ರಾರಂಭದಲ್ಲಿ ಕೊರೊನಾ ವೈರಸ್ ಬಗ್ಗೆ ಅಮೆರಿಕ ನಿರ್ಲಕ್ಷ್ಯವಹಿಸಿದ್ದೇ ಅತಿ ಹೆಚ್ಚಿನ ಪ್ರಮಾಣದಲ್ಲಿ ಸೋಂಕು ಹರಡಲು ಕಾರಣವಾಯಿತು ಎಂದು ಅಭಿಪ್ರಾಯಪಟ್ಟರು.