ದೊಡ್ಡಬಳ್ಳಾಪುರ: ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಬಾಮೈದನೇ ಬಾವನನ್ನು ಕೊಲೆ ಮಾಡಿ ಪರಾರಿಯಾಗಿದ್ದನು. ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಮೈದ ಮತ್ತು ಆತನ ಸ್ನೇಹಿತನನ್ನು ದೊಡ್ಡಬಳ್ಳಾಪುರ ಪೊಲೀಸರು ಬಂಧಿಸಿದ್ದಾರೆ.
ಜುಲೈ 11 ರಂದು ದೊಡ್ಡಬಳ್ಳಾಪುರ ನಗರದ ಕರೇನಹಳ್ಳಿಯ ಬಡಿಗೆ ಸಿದ್ದಪ್ಪನವರ ಜಮೀನಿನಲ್ಲಿ ಹಾಡಹಗಲೇ ಯುವಕನ ಕೊಲೆ ಮಾಡಲಾಗಿತ್ತು. ಘಟನೆಯಲ್ಲಿ ಗೌರಿಬಿದನೂರು ತಾಲೂಕಿನ ಮಂಚೇನಹಳ್ಳಿಯ ನವೀನ್ (30) ಸ್ಥಳದಲ್ಲೇ ಸಾವನ್ನಪ್ಪಿದ್ದ. ಮೃತ ನವೀನ್ ಬಾಮೈದ ವೆಂಕಟೇಶ್ ತನ್ನ ಸ್ನೇಹಿತ ನಿರಂಜನ್ ಜೊತೆ ಸೇರಿ ಕೊಲೆ ಮಾಡಲಾಗಿದ್ದು, ಘಟನೆ ನಂತರ ಆರೋಪಿಗಳಾದ ವೆಂಕಟೇಶ್, ನಿರಂಜನ್ ತಲೆ ಮರೆಸಿಕೊಂಡಿದ್ದರು.
ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆರೋಪಿಗಳ ಪತ್ತೆಗಾಗಿ ಡಿವೈಎಸ್ಪಿ ರಂಗಪ್ಪ ಅವರ ಮಾರ್ಗದರ್ಶನದಲ್ಲಿ ಸಿಪಿಐ ಸತೀಶ್ ಸಬ್ ಇನ್ಸ್ಪೆಕ್ಟರ್ ಮಂಜುನಾಥ್ ನೇತೃತ್ವದಲ್ಲಿ ತಂಡ ರಚನೆ ಮಾಡಲಾಗಿದ್ದು, ಕೊಲೆಯಾದ ಮೂರೇ ದಿನಕ್ಕೆ ಆರೋಪಿಗಳನ್ನ ಬಂಧಿಸಲಾಗಿದೆ.
ಇಬ್ಬರ ದಾಂಪತ್ಯದ ನಡುವೆ ಬಂದ ಮೂರನೇ ವ್ಯಕ್ತಿ ಕೊಲೆಗೆ ಕಾರಣವಾದನೇ?
ಕೊಲೆಯಾದ ನವೀನ್ ದೊಡ್ಡಬಳ್ಳಾಪುರಕ್ಕೆ ವಿದ್ಯಾಭ್ಯಾಸಕ್ಕೆಂದು ಬಂದ ಸಮಯದಲ್ಲಿ ಕರೇನಹಳ್ಳಿಯ ಗಾಯಿತ್ರಿಯನ್ನ ಪ್ರೀತಿಸಿ ಮದುವೆಯಾಗಿದ್ದ, 16ನೇ ವರ್ಷಕ್ಕೆ ಇಬ್ಬರು ಮದುವೆಯಾಗಿದ್ದರು. ಇಬ್ಬರ ಜಾತಿ ಬೇರೆ ಬೇರೆಯಾದ ಕಾರಣಕ್ಕೆ ಹುಡುಗಿ ಕುಟುಂಬದಿಂದ ಪ್ರಾರಂಭದಲ್ಲಿ ವಿರೋಧ ಇತ್ತು. ನಂತರ ಎರಡು ಮನೆಗಳಿಗೂ ಬಂದು ಹೋಗುತ್ತಿದ್ದರು.
ಮೆಕ್ಯಾನಿಕ್ ಕೆಲಸ ಮಾಡುತ್ತಿದ್ದ ನವೀನ್ ಹೆಂಡತಿ ಮಕ್ಕಳೊಂದಿಗೆ ತಂದೆ ತಾಯಿ ಜೊತೆ ಯಲಹಂಕದ ಹುಣಸಮಾರನಹಳ್ಳಿಯಲ್ಲಿ ವಾಸವಾಗಿದ್ದರು. ಪ್ರಾರಂಭದಲ್ಲಿ ಚೆನ್ನಾಗಿದ್ದ ಸಂಸಾರ ಮೂರನೇ ಮಗು ಜನನದ ಹೊತ್ತಿಗೆ ಕಲಹ ಶುರುವಾಗಿತ್ತು. ಇವರಿಬ್ಬರ ನಡುವೆ ಮೂರನೇ ವ್ಯಕ್ತಿಯ ಪ್ರವೇಶವಾದ ಹಿನ್ನೆಲೆ ಜಗಳ ಶುರುವಾಯಿತು ಎನ್ನಲಾಗಿದೆ. ಎರಡು ವರ್ಷದ ಹಿಂದೆ ಮೂರನೇ ಮಗುವಿನ ಹೆರಿಗೆಗೆಂದು ತವರು ಮನೆಗೆ ಹೋದ ನಂತರ ಗಾಯಿತ್ರಿ ನಂತರ ಗಂಡನ ಮನೆಗೆ ಬರಲೇ ಇಲ್ಲ. ತನ್ನ ಹೆಂಡಿಯನ್ನ ಮನೆಗೆ ಕರೆಸಿಕೊಳ್ಳಲು ನವೀನ್ ಸಾಕಷ್ಟು ಪ್ರಯತ್ನ ನಡೆಸಿದ್ದನು. ಇದೇ ಕಾರಣಕ್ಕೆ ಆತನ ಕೊಲೆ ಮಾಡಲಾಗಿದೆ ಎಂದು ಮೃತ ನವೀನ್ ಕುಟುಂಬದವರು ಆರೋಪಿಸುತ್ತಿದ್ದಾರೆ.