ಬಾಗಲಕೋಟೆ: ಜಿಲ್ಲೆಯ ಗ್ರಾಮ ಪಂಚಾಯತ್ ವ್ಯಾಪ್ತಿಗಳಲ್ಲಿ ಒತ್ತುವರಿಯಾಗಿದ್ದ ಒಟ್ಟು 148 ಆಸ್ತಿಗಳ ಪೈಕಿ 36 ಆಸ್ತಿಗಳನ್ನು ತೆರೆವುಗೊಳಿಸಿ ತಂತಿ ಬೇಲಿ ಹಾಕಲಾಗಿದೆ ಎಂದು ಜಿ.ಪಂ ಸಿಇಒ ಗಂಗೂಬಾಯಿ ಮಾನಕರ ತಿಳಿಸಿದರು.
ಜಿ.ಪಂ ಸಿಇಒ ಕಚೇರಿಯಲ್ಲಿ ಕರೆಯಲಾಗಿದ್ದ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಇನ್ನು 112 ಒತ್ತುವರಿ ಆಸ್ತಿಗಳನ್ನು ತೆರವುಗೊಳಿಸಬೇಕಾಗಿದೆ. ಬಾದಾಮಿ ತಾಲೂಕಿನಲ್ಲಿ 51, ಬೀಳಗಿ 57, ಜಮಖಂಡಿ 2 ಹಾಗೂ ಮುಧೋಳ ತಾಲೂಕಿನಲ್ಲಿ 2 ಒತ್ತುವರಿಯಾದ ಆಸ್ತಿಗಳು ಇವೆ. ಈ ನಿಟ್ಟಿನಲ್ಲಿ ಸಂಬಂಧಪಟ್ಟ ಆಯಾ ತಾಲೂಕು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ ಒತ್ತುವರಿ ಆಸ್ತಿಗಳ ತೆರವಿಗೆ ಟಾರ್ಗೆಟ್ ನೀಡಲಾಗಿದೆ ಎಂದು ತಿಳಿಸಿದರು.
ಒತ್ತುವರಿ ಆಸ್ತಿಗಳ ತೆರವು ಪ್ರಕರಣಗಳಲ್ಲಿ ಒಂದಕ್ಕೆ ಮಾತ್ರ 25 ಸಾವಿರ ದಂಡ ವಿಧಿಸಲಾಗಿದೆ. ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ಆಸ್ತಿಗಳಾದ ಗ್ರಾಮ ಠಾಣಾ, ಸಾರ್ವಜನಿಕ ರಸ್ತೆ, ಕಾಲುವೆಗಳು, ಕೆರೆಗಳು, ಆಟದ ಮೈದಾನ, ಉದ್ಯಾನಗಳು, ಸಾರ್ವಜನಿಕರ ಉಪಯೋಗಕ್ಕಾಗಿ ಇರಿಸಿದ ಪ್ರದೇಶ, ಸ್ಮಶಾನ ಅಥವಾ ರುದ್ರಭೂಮಿ, ನಿವೇಶನ, ಚರಂಡಿ, ಗಟಾರ, ಚರಂಡಿಗಳು ಒತ್ತುವರಿ ಆಗದಂತೆ ನೋಡಿಕೊಳ್ಳಬೇಕು. ಒತ್ತುವರಿ ಕಂಡುಬಂದಲ್ಲಿ ತಕ್ಷಣ ಕ್ರಮಕೈಗೊಳ್ಳುವಂತೆ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.
ಅನಧಿಕೃತ ಮದ್ಯ ಮಾರಾಟಗಾರರ ವಿರುದ್ದ ಕ್ರಮ :ಅಬಕಾರಿ ಕಾಯ್ದೆ ಅನ್ವಯ ಲೈಸನ್ಸ್ ಇಲ್ಲದ ಮದ್ಯ ಮಾರಾಟ ಅಂಗಡಿಗಳನ್ನು ಬಂದ್ ಮಾಡುವ ಮೂಲಕ ಪ್ರಕರಣ ದಾಖಲಿಸಲಾಗುವುದು. ಜಿಲ್ಲೆಯಲ್ಲಿ ಏಪ್ರಿಲ್ 19 ರಿಂದ ಇಲ್ಲಿವರೆಗೆ ಒಟ್ಟು 401 ಪ್ರಕರಣಗಳನ್ನು ದಾಖಲಿಸಲಾಗಿದ್ದು, 10.28 ಲಕ್ಷ ರೂ. ದಂಡ ವಿಧಿಸಲಾಗಿದೆ. ಲೈಸನ್ ಇಲ್ಲದಿದ್ದರೆ ಪ್ರಕರಣ ದಾಖಲಿಸಿ ಕ್ರಮಕೈಗೊಳ್ಳಲಾಗುತ್ತಿದೆ. ಲೈಸನ್ಸ್ ಇಲ್ಲದೇ ಮದ್ಯ ಮಾರಾಟ ಮಾಡಿದಲ್ಲಿ ಈ ಮೊದಲು 2 ಸಾವಿರ ರೂ. ಇತ್ತು, ಈಗ 5 ಸಾವಿರ ರೂ. ದಂಡ ಹಾಕಲಾಗುತ್ತಿದೆ ಎಂದು ಅಬಕಾರಿ ಇಲಾಖೆಯ ಉಪ ಅಧೀಕ್ಷಕ ಎಸ್.ಎಂ.ಕಮತರ ಮಾಹಿತಿ ನೀಡಿದರು.
ಕೂಡಲಸಂಗಮದಲ್ಲಿ ಮದ್ಯ ನಿಷೇಧಕ್ಕಾಗಿ ನಡೆಯುತ್ತಿರುವ ಪ್ರತಿಭಟನೆ ಕುರಿತು ಮಾತನಾಡಿದ ಅವರು, ಸಂಪೂರ್ಣ ಮದ್ಯ ನಿಷೇಧ ವಿಷಯ ಸರಕಾರದ ಮಟ್ಟದಲ್ಲಿ ಆಗುವ ಕೆಲಸವಾಗಿದೆ. ಮದ್ಯದಂಗಡಿಗೆ ಇಂತಿಷ್ಟೇ ಎಂದು ಟಾರ್ಗೆಟ್ ಇಲ್ಲವೆಂದು ತಿಳಿಸಿದರು.
ಜಿಲ್ಲೆಯಲ್ಲಿ ಕರೋನಾ ವೈರಸ್ ಇಲ್ಲ: ಕರೋನಾ ವೈರಸ್ ಎಂಬ ರೋಗವು ತೀವ್ರವಾಗಿ ಒಬ್ಬರಿಂದ ಒಬ್ಬರಿಗೆ ಹರಡುವ ಸಾಧ್ಯತೆ ಹೆಚ್ಚಾಗಿದ್ದು, ಚೀನಾದಲ್ಲಿ ಈ ರೋಗ ಕಂಡುಬಂದಿದೆ. ಕರೋನಾ ವೈರಸ್‍ನಿಂದ ಬಳಲುವ ವ್ಯಕ್ತಿಗಳಲ್ಲಿ ತೀವ್ರವಾದ ಜ್ವರ, ಕೆಮ್ಮು, ನೆಗಡಿ, ಉಸಿರಾಟದ ತೊಂದರೆ ಹಾಗೂ ಬೇಧಿ ಲಕ್ಷಣಗಳು ಕಂಡುಬರುತ್ತವೆ. ಇಂತಹ ಲಕ್ಷಣಗಳು ಜಿಲ್ಲೆಯಲ್ಲಿ ಕಂಡುಬಂದರೆ ತಕ್ಷಣ ಸಮೀಪದ ಸರಕಾರಿ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆಯಬೇಕು ಎಂದು ಜಿಲ್ಲಾ ಸಮೀಕ್ಷಣಾಧಿಕಾರಿ ಡಾ.ವಿಜಯ ಕಂಠಿ ತಿಳಿಸಿದರು.
ಜಿಲ್ಲೆಯಲ್ಲಿ ಕೊರೋನಾ ಪ್ರಕರಣಗಳು ಇಲ್ಲಿವರೆಗೆ ಕಂಡುಬಂದಿರುವುದಿಲ್ಲ. ಒಂದು ವೇಳೆ ಕಂಡುಬಂದಲ್ಲಿ ಮುಂಜಾಗ್ರತೆಯಾಗಿ ಅಗತ್ಯವಿರುವ ಔಷಧಗಳನ್ನು ಹಾಗೂ ತಪಾಸಣೆಗೆ ಬೇಕಾಗುವ ಸಾಮಗ್ರಿಗಳನ್ನು ಸಾಕಷ್ಟು ಪ್ರಮಾಣದಲ್ಲಿ ಜಿಲ್ಲಾ ಸಮೀಕ್ಷಣಾ ಘಟಕದಲ್ಲಿ ಸಂಗ್ರಹಿಸಿಡಲಾಗಿದೆ. ಶ್ವಾಸೋಚ್ಚಾಸದ ತೊಂದರೆಯು ಕಂಡುಬಂದವರು ಮೇಲಿಂದ ಮೇಲೆ ಸಾಬೂನಿನಿಂದ ಕೈಗಳನ್ನು ತೊಳೆಯಬೇಕು. ಕೆಮ್ಮುವಾಗ ಹಾಗೂ ಸೀನುವಾಗ ಮೂಗು ಹಾಗೂ ಬಾಯಿಯನ್ನು ಮುಚ್ಚಿಕೊಳ್ಳಬೇಕು. ತೀವ್ರವಾದ ಕೆಮ್ಮು ಹಾಗೂ ಉಸಿರಾಟದ ತೊಂದರೆ ಇರುವ ವ್ಯಕ್ತಿಗಳಿಂದ ದೂರವಿರಬೇಕು. ಹಸ್ತಲಾಘವ ಅಥವಾ ಅಪ್ಪುಗೆಯನ್ನು ವರ್ಜಿಸಬೇಕು ಎಂದು ತಿಳಿಸಿದರು.
ಗ್ರಾಮ ಪಂಚಾಯತಿಗಳಲ್ಲಿ ಜೀವವೈವಿಧ್ಯತಾ ಸಮಿತಿ ರಚನೆ : ಜೈವಿಕ ವೈವಿಧ್ಯ ಕಾಯ್ದೆಯನ್ವಯ ಜಿಲ್ಲೆಯಲ್ಲಿರುವ ಒಟ್ಟು 198 ಗ್ರಾಮ ಪಂಚಾಯತಿಗಳಲ್ಲಿ ಜೀವವೈವಿಧ್ಯತಾ ನಿರ್ವಹಣಾ ಸಮಿತಿಯನ್ನು ರಚಿಸಲಾಗಿದೆ. ಈ ಸಮಿತಿಯ ಮೂಲಕ ಸ್ಥಳೀಯ ಜನರೊಡನೆ ಸಮಾಲೋಚಿಸಿ, ಜನತಾ ಜೀವವೈವಿಧ್ಯ ದಾಖಲಾತಿಯನ್ನು ಸಿದ್ದಪಡಿಸಲಾಗುತ್ತದೆ. ಈ ದಾಖಲಾತಿಯಲ್ಲಿ ಸ್ಥಳೀಯ ಜೈವಿಕ ಸಂಪನ್ಮೂಲಗಳ ಲಭ್ಯತೆ ಮತ್ತು ಸಂಬಂಧಿಸಿದ ಜ್ಞಾನ, ಔಷಧೀಯ ಅಥವಾ ಬೇರಾವುದೇ ಬಳಕೆ, ಅವುಗಳ ಬಗೆಗಿನ ಸಾಂಪ್ರದಾಯಿಕ ಜ್ಞಾನದ ಸವಿವರವಾದ ಮಾಹಿತಿ ಒಳಗೊಂಡಿರುತ್ತದೆ ಎಂದು ಜಿ.ಪಂ ಸಿಇಒ ಗಂಗೂಬಾಯಿ ಮಾನಕರ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎ.ಎನ್.ದೇಸಾಯಿ ಇದ್ದರು.