ಬಾಗಲಕೋಟೆ: ಮಲಪ್ರಭೆಯ ಪ್ರವಾಹದಿಂದ ಹುನಗುಂದ ತಾಲೂಕಿನ 7 ಗ್ರಾಮಗಳು ತೊಂದರೆಗೆ ಸಿಲುಕಿವೆ. ನದಿ ನೀರಿನಲ್ಲಿ ಯುವಕ ಕೊಚ್ಚಿಕೊಂಡು ಹೋಗಿದ್ದಾನೆ. ಈ ಘಟನೆ ಗಂಜೀಹಾಳ ಗ್ರಾಮದಲ್ಲಿ ನಡೆದಿದೆ. ಈ ಸಂಬಂಧ ಮಾಹಿತಿ ನೀಡಿರುವ ಜಿಲ್ಲಾಧಿಕಾರಿ ಪಿ. ಸುನೀಲ್ ಕುಮಾರ, ಹುನಗುಂದ ತಾಲೂಕಿನ ಒಟ್ಟು 161 ಕುಟುಂಬಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ ಎಂದು ತಿಳಿಸಿದ್ದಾರೆ.
ಹುನಗುಂದ ತಾಲೂಕಿನ ಗಂಜೀಹಾಳ ಗ್ರಾಮದಲ್ಲಿರುವ 1,110 ಮನೆಗಳ ಪೈಕಿ 25 ಕುಟುಂಬಗಳು, ಹಿರೇಮಳಗಾವಿ ಗ್ರಾಮದ 70 ಕುಟುಂಬಗಳು ಮತ್ತು ಚಿತ್ತರಗಿ ಗ್ರಾಮದ 26 ಕುಟುಂಬಗಳನ್ನು ಆಸರೆ ಗ್ರಾಮಕ್ಕೆ ಕಳುಹಿಸಲಾಗಿದೆ. ಹೂವನೂರ ಗ್ರಾಮದ ಕುಟುಂಬವೊಂದನ್ನು ಸಂಬಂಧಿಕರ ಮನೆಗೆ, ವರಗೋಡದಿನ್ನಿ ಗ್ರಾಮದ 2 ಕುಟುಂಬಗಳು ಮತ್ತು ಖಜಗಲ್ ಗ್ರಾಮದ 37 ಕುಟುಂಬಗಳು ಆರ್ಸಿ ಸೆಂಟರ್ನ ಸಮುದಾಯ ಭವನದಲ್ಲಿ ಉಳಿದುಕೊಳ್ಳಲು ತಾತ್ಕಲಿಕವಾಗಿ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಡಿಸಿ ಹೇಳಿದರು.
ಮಲಪ್ರಭಾ ದಡದಲ್ಲಿರುವ ಗಂಜೀಹಾಳ ಗ್ರಾಮದ ನಿವಾಸಿ ದೇವಾನಂದ ಕಮ್ಮಾರ (20) ನದಿ ದಡದಲ್ಲಿರುವ ತಮ್ಮ ಜಮೀನಿಗೆ ನೀರು ಹಾಯಿಸಲು ಹಾಕಲಾಗಿದ್ದ ಮೋಟಾರ್ ಪಂಪ್‍ಸೆಟ್ ತೆಗೆದುಕೊಳ್ಳಲು ಹೋಗಿದ್ದರು. ಈ ಸಂದರ್ಭದಲ್ಲಿ ಪ್ರವಾಹದಲ್ಲಿ ಕೊಚ್ಚಿಕೊಂಡು ಹೋಗಿದ್ದಾರೆ. ಪತ್ತೆಗಾಗಿ ಅಗ್ನಿಶಾಮಕ ತಂಡ ಶೋಧ ಕಾರ್ಯ ಕೈಗೊಂಡಿದೆ.
ಇದನ್ನೂ ಓದಿ: ಭಾರಿ ಮಳೆ: ಬಾದಾಮಿ ಗುಹಾಲಯ ಎದುರು ಕೆರೆಯಂತಾದ ರಸ್ತೆ.. ವಿಡಿಯೋ