ಬಾಗಲಕೋಟೆ: ಜಿಲ್ಲೆಯಲ್ಲಿ ಕೊರೊನಾ ಹೆಚ್ಚಾಗುತ್ತಿರುವ ಹಿನ್ನಲೆ, ಜಿಲ್ಲೆಯ ಶಾಸಕರು ಹಾಗೂ ಜಿಲ್ಲಾಧಿಕಾರಿಗಳೊಂದಿಗೆ ವಿಡಿಯೋ ಮೂಲಕ ಸಂವಾದ ನಡೆಸಿದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಜಿಲ್ಲೆಯಲ್ಲಿ ಯಾವುದೇ ಸಮಸ್ಯೆ ಆಗದಂತೆ ನೋಡಿಕೊಳ್ಳಬೇಕು ಎಂದು ಒತ್ತಾಯಿಸಿದರು.
ವಿಡಿಯೋ ಸಂವಾದದಲ್ಲಿ ಕೊರೊನಾ ಕುರಿತ ಪ್ರಮುಖ ವಿಷಯಗಳ ಬಗ್ಗೆ ಚರ್ಚೆ ನಡೆಸಿ, ನಂತರ ಸರ್ಕಾರದ ವಿವಿಧ ಸಚಿವರು ಹಾಗೂ ಅಧಿಕಾರಿಗಳೊಂದಿಗೆ ದೂರವಾಣಿ ಮೂಲಕ ಮಾತನಾಡಿ, ಜಿಲ್ಲೆಯಲ್ಲಿ ಕೊರೊನಾ ತಡೆಗಟ್ಟಲು ಅಗತ್ಯ ಕ್ರಮ ಕೈಗೊಳ್ಳಲು ಮನವಿ ಮಾಡಿದರು.
ಬಾಗಲಕೋಟೆ ಜಿಲ್ಲೆಗೆ ಅಗತ್ಯವಿರುವ ಆಕ್ಸಿಜನ್, ರೆಮ್ಡೆಸಿವಿರ್ ಚುಚ್ಚುಮದ್ದು ಹಾಗೂ ಲಸಿಕೆಯನ್ನು ಅಗತ್ಯಕ್ಕೆ ಅನುಗುಣವಾಗಿ ಪೂರೈಕೆ ಮಾಡುವಂತೆ ಸರ್ಕಾರವನ್ನು ಒತ್ತಾಯಿಸಿದರು. ನಂತರ ರೆಮ್ಡೆಸಿವಿರ್ ಪೂರೈಕೆ ಉಸ್ತುವಾರಿ ವಹಿಸಿಕೊಂಡಿರುವ ಉಪ ಮುಖ್ಯಮಂತ್ರಿ ಡಾ. ಅಶ್ವತ್ಥ ನಾರಾಯಣ, ಆಕ್ಸಿಜನ್ ಪೂರೈಕೆ ಹೊಣೆ ಹೊತ್ತಿರುವ ಸಚಿವರಾದ ಜಗದೀಶ್ ಶೆಟ್ಟರ್ ಅವರೊಂದಿಗೆ ದೂರವಾಣಿ ಮೂಲಕ ಮಾತುಕತೆ ನಡೆಸಿದರು.
ಜೊತೆಗೆ ಸರ್ಕಾರದ ಮುಖ್ಯ ಕಾರ್ಯದರ್ಶಿ ರವಿಕುಮಾರ್ ಅವರೊಂದಿಗೂ ಚರ್ಚೆ ನಡೆಸಿ ಬಾಗಲಕೋಟೆ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರಿಗೆ ತೊಂದರೆ ಆಗದಂತೆ ಬೆಡ್, ಆಕ್ಸಿಜನ್ ವ್ಯವಸ್ಥೆ ಮಾಡಲು ತಿಳಿಸಿದರು. ವಿಡಿಯೋ ಸಂವಾದದಲ್ಲಿ ಜಿಲ್ಲಾಧಿಕಾರಿ ಡಾ.ಕೆ.ರಾಜೇಂದ್ರ ಮಾಹಿತಿ ನೀಡಿ, ಜಿಲ್ಲೆಯಲ್ಲಿ ಇದುವರೆಗೂ ಒಟ್ಟು 19,540 ಕೊರೊನಾ ಪ್ರಕರಣಗಳು ಪತ್ತೆಯಾಗಿದ್ದು, ಅದರಲ್ಲಿ 3,287 ಸಕ್ರಿಯ ಪ್ರಕರಣಗಳನ್ನು ಗುರುತಿಸಲಾಗಿರುತ್ತದೆ. ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ 437, ಖಾಸಗಿ ಆಸ್ಪತ್ರೆಯಲ್ಲಿ 813 ಬೆಡ್ ಸೌಲಭ್ಯವಿರುತ್ತದೆ. ಆದರೆ, ಆಕ್ಸಿಜನ್ ಮತ್ತು ರೆಮ್ಡಿಸಿವರ್ ಔಷಧಿಯ ಕೊರತೆ ಕಂಡು ಬಂದಿದೆ.
ಬಾಗಲಕೋಟೆ ಜಿಲ್ಲೆಗೆ ಆಕ್ಸಿಜನ್ ಪ್ರತಿನಿತ್ಯ 15 ಕೆ.ಎಲ್ ಅವಶ್ಯವಿದ್ದು, 7.5 ಕೆ.ಎಲ್ ಮಾತ್ರ ಲಭ್ಯವಿದೆ. ಜಿಲ್ಲೆಯಾದ್ಯಂತ ಕೋವಿಡ್ ಸೋಂಕಿತರ ಚಿಕಿತ್ಸೆಗೆ ಅಗತ್ಯವಿರುವ ಬೆಡ್‍ಗಳ ಕೊರತೆ ಇಲ್ಲ. ಜಿಲ್ಲೆಯಲ್ಲಿ 171 ಮಂದಿ ಐ.ಸಿ.ಯು, 93 ಮಂದಿ ವೆಂಟಿಲೇಟರ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ವರೆಗೆ 30 ಮಂದಿ ಸೋಂಕಿತರು ಸಾವಿಗೀಡಾಗಿದ್ದಾರೆ ಎಂದು ತಿಳಿಸಿದರು.
ಬಾದಾಮಿ ವಿಧಾನಸಭಾ ಕ್ಷೇತ್ರದಲ್ಲಿ 2,528 ಸೋಂಕಿತರು ಪತ್ತೆಯಾಗಿದ್ದಾರೆ. 540 ಸಕ್ರಿಯ ಪ್ರಕರಣಗಳಿವೆ. ಏಳು ಮಂದಿ ಈವರೆಗೆ ಮೃತರಾಗಿದ್ದಾರೆ. ಗುಳೆ ಹೋಗಿ ವಾಪಸ್ ಬಂದಿರುವ ಜನರಿಗೆ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಲ್ಲಿ ಉದ್ಯೋಗ ಒದಗಿಸಿ ಅವರಿಗೆ ವೇತನ, ಊಟೋಪಚಾರದ ವ್ಯವಸ್ಥೆ ಮಾಡುವಂತೆ ಸಿದ್ದರಾಮಯ್ಯ ಅಧಿಕಾರಿಗಳಿಗೆ ಸೂಚಿಸಿದರು.
ಜೊತೆಗೆ ಪಡಿತರ ಮೂಲಕ ಆಹಾರ ಧಾನ್ಯ ಪೂರೈಕೆ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ಮಾಡುವಂತೆ ತಿಳಿಸಿದರು.