ಬಾಗಲಕೋಟೆ: ಮಹಾಲಿಂಗಪುರದಲ್ಲಿ ವ್ಯಕ್ತಿಯನ್ನು ಕೊಲೆ ಮಾಡಿ ಬಾವಿಗೆಸೆದ ಪ್ರಕರಣವನ್ನು ಬೇಧಿಸಿರುವ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ವಿವಾಹೇತರ ಸಂಬಂಧದ ಹಿನ್ನೆಲೆಯಲ್ಲಿ ಪತ್ನಿಯೇ ಪ್ರಿಯಕರನ ಜೊತೆ ಸೇರಿ ಪತಿಯನ್ನು ಕೊಲೆ ಮಾಡಿರುವುದು ಬೆಳಕಿಗೆ ಬಂದಿದೆ.
ಕಾವ್ಯಶ್ರೀ ಬಟ್ಟಲ್(21) ಹಾಗೂ ಈಕೆಯ ಪ್ರಿಯಕರ ಮಲ್ಲಪ ನಾಶಿ(24) ಬಂಧಿತರು. ಇವರು ಮೇ.11 ರಂದು ಪ್ರವೀಣ ಬಟ್ಟಲ್ (ಕಾವ್ಯಶ್ರೀಯ ಪತಿ) ಎಂಬ 33 ವರ್ಷದ ವ್ಯಕ್ತಿಯನ್ನು ಕೊಲೆ ಮಾಡಿ ಚೀಲವೊಂದರಲ್ಲಿ ಕಟ್ಟಿ ಬಾವಿಗೆ ಎಸೆದಿದ್ದ ವಿಚಾರ ಹೊರಬಿದ್ದಿದೆ.
ಆರೋಪಿ ಮಲ್ಲಪ್ಪ ನಾಶಿ ಕಂಪ್ಯೂಟರ್ ಅಂಗಡಿಯನ್ನು ನಡೆಸುತ್ತಿದ್ದ. ಕೊಲೆಗೀಡಾದ ಪ್ರವೀಣ್ ಬಟ್ಟಲ್ ಮಧ್ಯಾಹ್ನ ಬಂದು ವಿಶ್ರಾಂತಿ ಪಡೆಯುತ್ತಿದ್ದ. ಈ ವೇಳೆ ಮಲ್ಲಪ್ಪ ಬಟ್ಟಲ್ ಮುಖದ ಮೇಲೆ ಚಾದರ್ ಹಾಕಿ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ. ನಂತರ ರಾತ್ರಿ ಸಮಯದಲ್ಲಿ ತನ್ನ ಬೈಕ್ ಮೇಲೆ ಶವವನ್ನು ತೆಗೆದುಕೊಂಡು ಹೋಗಿ ಬಾವಿಗೆ ಎಸೆದಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಈ ಕುರಿತಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರಿಗೆ ಮಾಹಿತಿ ಬಯಲಿಗೆ ಬಂದಿದ್ದು, ಕೊಲೆಯಾದ ವ್ಯಕ್ತಿಯ ಪತ್ನಿ ಹಾಗೂ ಕೊಲೆ ಮಾಡಿದ ವ್ಯಕ್ತಿಯ ನಡುವೆ ವಿವಾಹೇತರ ಸಂಬಂಧ ಇರುವುದು ತಿಳಿದಿದೆ.
ಇನ್ನು, ಬಂಧಿತರಿಂದ ಪೊಲೀಸರು ಎರಡು ಬೈಕ್, ಮೂರು ಮೊಬೈಲ್ ಹಾಗೂ 22.50 ಗ್ರಾಂ ಚಿನ್ನಾಭರಣ ವಶಕ್ಕೆ ಪಡೆದುಕೊಂಡು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.