ಬಾಗಲಕೋಟೆ: ತನ್ನ ಹೆಂಡತಿಯೊಂದಿಗೆ ಇನ್ನೊಬ್ಬ ವ್ಯಕ್ತಿ ಅನೈತಿಕ ಸಂಬಂಧ ಇಟ್ಟುಕೊಂಡಿದ್ದಾನೆ ಎಂಬ ಶಂಕೆಯ ಮೇಲೆ ಕೆರಳಿದ ಗಂಡ ಕೊಲೆಗಾರನಾಗಿದ್ದಾನೆ. ಪತ್ನಿ ಜೊತೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದ ವ್ಯಕ್ತಿಯನ್ನು, ಪತಿಯೇ ಕೊಲೆ ಮಾಡಿರುವ ಘಟನೆ ಜಿಲ್ಲೆಯ ಇಳಕಲ್ಲ ತಾಲೂಕಿನ ಚಟ್ನಿಹಾಳ ಗ್ರಾಮದಲ್ಲಿ ನಡೆದಿದೆ.
ಆರೋಪಿ ಪತಿ, ಪತ್ನಿಯ ಪ್ರಿಯಕರನ ತಲೆಗೆ ದೊಣ್ಣೆಯಿಂದ ಹೊಡೆದು ಕೊಲೆ ಮಾಡಿದ್ದಾನೆ. ಅಲ್ಲಾಸಾಬ್ ನದಾಫ್ (28) ಕೊಲೆಯಾದ ವ್ಯಕ್ತಿ. ಗ್ಯಾನಪ್ಪ ಪೂಜಾರ ಎಂಬಾತ ಕೊಲೆ ಆರೋಪಿ.
ಗ್ಯಾನಪ್ಪ ತನ್ನ ಪತ್ನಿ ಮೇಲೂ ಹಲ್ಲೆ ಮಾಡಿದ್ದು, ಆಕೆ ಇಳಕಲ್ಲ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಪತಿ ಇಲ್ಲದಿದ್ದಾಗ ಪ್ರಿಯಕರ ಅಲ್ಲಾಸಾಬ್ ಮನೆಗೆ ಬಂದಿದ್ದು, ಇಬ್ಬರು ಗ್ಯಾನಪ್ಪ ಕೈಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ. ಬಳಿಕ ಆತ ಪತ್ನಿ ಹಾಗೂ ಅಲ್ಲಾಸಾಬ್ ಇಬ್ಬರ ಮೇಲೂ ಹಲ್ಲೆ ಮಾಡಿದ್ದಾನೆ.
ಇದನ್ನೂ ಓದಿ: ಮೈಸೂರು: ರಸ್ತೆ ಅಪಘಾತದಲ್ಲಿ ಮೃತಪಟ್ಟ ಅಣ್ಣನ ಮೃತದೇಹ ನೋಡಿ ಹೃದಯಾಘಾತದಿಂದ ತಂಗಿಯೂ ಸಾವು
ಅಲ್ಲಾಸಾಬ್ನ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ ಕಾರಣ ಆತ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ಗ್ಯಾನಪ್ಪ, ಆತನ ತಂದೆ ಚಂದ್ರಪ್ಪ, ಸಹೋದರ ಹನುಮಂತ ಮೂವರನ್ನು ಪೊಲೀಸರು ವಶಕ್ಕೆ ಪಡೆದು, ವಿಚಾರಣೆ ನಡೆಸಿದ್ದಾರೆ. ಇಳಕಲ್ಲ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಿಸಿ, ತನಿಖೆ ನಡೆಸಲಾಗುತ್ತಿದೆ.