ಬಾಗಲಕೋಟೆ: ತೇರದಾಳ ಮತ ಕ್ಷೇತ್ರದ ಶಾಸಕ ಸಿದ್ದು ಸವದಿ ಹಾಗೂ ಪ್ರತಿಭಟನಾನಿರತ ನೇಕಾರರ ಮಧ್ಯೆ ಮಾತಿನ ಚಕಮಕಿ ನಡೆದಿದೆ. ನೇಕಾರ ಮುಖಂಡ ಶಿವಲಿಂಗ ಟಿರ್ಕಿ ಜೊತೆ ಶಾಸಕ ಸವದಿ ಏಕವಚನದಲ್ಲಿ ಮಾತನಾಡಿ ಉದ್ಧಟತನ ತೋರಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಶೌಚಾಲಯ, ಚರಂಡಿ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಬನಹಟ್ಟಿಯಲ್ಲಿ ನೇಕಾರರ ಮುಖಂಡ ಶಿವಲಿಂಗ ಟಿರ್ಕಿ ನೇತೃತ್ವದಲ್ಲಿ ಹಲವಾರು ಮಂದಿ ಸೇರಿಕೊಂಡು ಶಾಸಕ ಸಿದ್ದು ಸವದಿ ಮನೆ ಮುಂದೆ ಪ್ರತಿಭಟನೆ ಮಾಡುತ್ತಿದ್ದರು. ಶಾಸಕರು ಮನೆ ಒಳಗೆ ಇದ್ದರೂ ಸಹ ನೇಕಾರರ ಪ್ರತಿಭಟನೆ ಕುರಿತು ಗಮನ ಹರಿಸಿಲ್ಲ. ಹೀಗಾಗಿ, ನೇಕಾರರು ಶಾಸಕರ ಮನೆ ಮುಂದೆಯ ರಸ್ತೆ ಮೇಲೆ ಅಡುಗೆ ತಯಾರಿಸಿ ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ಓದಿ: ಬೆಳಗಾವಿಯಲ್ಲಿ ಬಿಜೆಪಿ ಪಕ್ಷದಿಂದ ಬೃಹತ್ ಪ್ರತಿಭಟನೆ; ಸತೀಶ್ ಜಾರಕಿಹೊಳಿ ಪ್ರತಿಕೃತಿ ದಹಿಸಿ ಆಕ್ರೋಶ
ಬಳಿಕ ಶಾಸಕರು ಬೆಂಗಳೂರಿಗೆ ಹೋಗುವುದಕ್ಕೆ ಮನೆ ಎದುರು ಬಂದಾಗ ಪ್ರತಿಭಟನಾಕಾರರು ಮನವಿ ಸಲ್ಲಿಸಲು ಮುಂದಾದದರು. ಈ ವೇಳೆ ನೇಕಾರ ಮುಖಂಡನಿಗೆ ನೀನು ನೇಕಾರನೇ ಅಲ್ಲ, ಇಲ್ಲಿಗ್ಯಾಕೆ ಬಂದೆ? ಎಂದು ಶಾಸಕರು ಏಕವಚನದಲ್ಲಿ ಮಾತನಾಡಿದ ಹಿನ್ನೆಲೆ ಇಬ್ಬರ ನಡುವೆ ಮಾತಿನ ಚಕಿಮಕಿ ನಡೆಯಿತು. ಬಳಿಕ ಶಾಸಕರ ಮಾತಿಗೆ ಅಸಮಾಧಾನಗೊಂಡ ನೇಕಾರರು ಧಿಕ್ಕಾರ ಕೂಗಿ ಆಕ್ರೋಶ ಹೊರಹಾಕಿದರು.