ಬಾಗಲಕೋಟೆ: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಮಂಡಿಸಿರುವ ಈ ಬಾರಿಯ ಬಜೆಟ್ ನೇಕಾರರಿಗೆ ನಿರಾಸೆ ಮೂಡಿಸಿದೆ ಎಂದು ನೇಕಾರರ ಮುಖಂಡ ಶಿವಲಿಂಗ ಟರ್ಕಿ ಹೇಳಿದ್ದಾರೆ.
ರಾಜ್ಯದಲ್ಲಿ ಈಗಾಗಲೇ 20 ಜನ ನೇಕಾರರು ಆತ್ಮಹತ್ಯೆ ಮಾಡಿಕೊಂಡಿದ್ದು, ಅವರಿಗೆ ಪರಿಹಾರ ಧನ ಸೇರಿದಂತೆ ಯಾವುದೇ ಸೌಲಭ್ಯ ಸಿಕ್ಕಿಲ್ಲ. ಇನ್ನು ರೈತ ಮತ್ತು ನೇಕಾರ ಒಂದೇ ನಾಣ್ಯದ ಎರಡು ಮುಖಗಳು ಅನ್ನೋ ಮುಖ್ಯಮಂತ್ರಿಗಳು ನೇಕಾರರನ್ನು ಕಡೆಗಣಿಸಿದ್ದಾರೆ ಎಂದರು.
ರಬಕವಿ-ಬನಹಟ್ಟಿಯಲ್ಲಿ ಜವಳಿ ಪಾರ್ಕ್ ನಿರ್ಮಾಣವಾಗಿ ಒಂದು ದಶಕವೇ ಕಳೆದು ಹೋಗಿದೆ. ಈಗ ಆ ಪ್ರದೇಶವೆಲ್ಲಾ ಯಾವುದೇ ಅಭಿವೃದ್ಧಿ ಇಲ್ಲದೆ ಕಸ, ಕಡ್ಡಿ, ಮುಳ್ಳಿನ ಕಂಟಿಯಿಂದ ಬೆಳೆದು ಹಾಳಾಗುತ್ತಿದೆ. ಈಗ ಮತ್ತೆ ಗುಳೇದಗುಡ್ಡ ಪಟ್ಟಣದಲ್ಲಿ ಜವಳಿ ಪಾರ್ಕ್ ಮಾಡುತ್ತಿರುವುದು ಯಾವ ಪುರುಷಾರ್ಥವಾಗಿ ಎಂದು ಮುಖ್ಯಮಂತ್ರಿಗಳ ವಿರುದ್ಧ ನೇಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕ್ಷೇತ್ರವಾಗಿರುವ ಹಿನ್ನೆಲೆ ಯಡಿಯೂರಪ್ಪನವರು ಗುಳೇದಗುಡ್ಡ ಪಟ್ಟಣಕ್ಕೆ ಜವಳಿ ಪಾರ್ಕ್ ನೀಡಿದ್ದಾರೆಯೇ ಹೊರತು, ನೇಕಾರರ ಅಭಿವೃದ್ಧಿಗಾಗಿ ಅಲ್ಲ. ಈ ಬಜೆಟ್ನಲ್ಲಿ ವೃತ್ತಿಪರ ನೇಕಾರರ ಅಭಿವೃದ್ಧಿಗಾಗಿ ಹೆಚ್ಚು ಪ್ರೋತ್ಸಾಹ ನೀಡದಿರುವುದು ಖಂಡನೀಯ ಎಂದು ನೇಕಾರರ ಮುಖಂಡ ಶಿವಲಿಂಗ ಟರ್ಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.