ಬಾಗಲಕೋಟೆ : ಮೀಸಲಾತಿಗೆ ಸಂಬಂಧಿಸಿದಂತೆ ಅಪಸ್ವರ ಎತ್ತಿರೋ ಚಂದನವನದ ಹಿರಿಯ ನಟ ಕಮ್ ರಾಜಕಾರಣಿ ಮುಖ್ಯಮಂತ್ರಿ ಚಂದ್ರು ವಿರುದ್ಧ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರು ಕಿಡಿಕಾರಿದ್ದಾರೆ.
ಈ ಕುರಿತು ನಗರದಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಚಂದ್ರು ಅವನೇನು ಮುಖ್ಯಮಂತ್ರಿಯೋ, ಪ್ರಧಾನಮಂತ್ರಿಯೋ?. ಪಂಚಮಸಾಲಿ ಸಮುದಾಯ ಮೀಸಲಾತಿ ಬೇಡ ಅನ್ನೋದಕ್ಕೆ ಇವರ್ಯಾರು? ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಮಗೆ ಮೀಸಲಾತಿ ಬೇಕಿದೆ, ಇದಕ್ಕಾಗಿಯೇ ರಾಜ್ಯದಲ್ಲಿ ಪಾದಯಾತ್ರೆ ಮಾಡಿದ್ದೇವೆ. 10 ಲಕ್ಷ ಜನ ಸೇರಿಸಿ ಸಮಾವೇಶ ಮಾಡಿ ನ್ಯಾಯ ಕೇಳಿದ್ದೇವೆ. ನಮಗೆ ಮೀಸಲಾತಿ ಬೇಡ ಅನ್ನೋಕೆ ಇವರ್ಯಾರು?. ನೀವು ನಿಮ್ಮಷ್ಟಕ್ಕೆ ಹೋರಾಟ ಮಾಡಿ. ನಮ್ಮ ತಂಟೆಗೆ ಬಂದ್ರೆ ಸುಮ್ಮನೆ ಕೂರೋಕಾಗಲ್ಲ ಎಂದು ಕಿಡಿಕಾರಿದರು.
ಆಗಸ್ಟ್ 26ರಂದು ಮಹದೇಶ್ವರ ಬೆಟ್ಟದಿಂದ ಪಂಚಮಸಾಲಿ ಪಂಚಾಯತ್ ಪ್ರತಿಜ್ಞೆ ಎಂದು ಜಾಗೃತ ಸಭೆಯನ್ನು ಹಮ್ಮಿಕೊಳ್ಳಲಾಗುವುದು. ಇದರ ನೇತೃತ್ವವನ್ನು ಕೂಡಲಸಂಗಮದ ಪಂಚಮಸಾಲಿ ಪೀಠದ ಶ್ರೀ ಜಯಮೃತ್ಯುಂಜಯ ಸ್ವಾಮೀಜಿಗಳು ವಹಿಸಿಕೊಳ್ಳಲಿದ್ದಾರೆ ಎಂದರು.
ಹೋರಾಟ ಮುಂದುವರೆಯುತ್ತದೆ : ಮೈಸೂರು, ಚಾಮರಾಜನಗರ ಜಿಲ್ಲೆಯಲ್ಲಿ ಗೌಡ-ಲಿಂಗಾಯತ ಸಮುದಾಯದವರು ಸಹ ಪಂಚಮಸಾಲಿ ಸಮುದಾಯಕ್ಕೆ ಸೇರುತ್ತಾರೆ. ಬೀದರ್, ಕಲಬುರ್ಗಿ ಭಾಗದಲ್ಲಿ ಹೋದಾಗ ದೀಕ್ಷೆ ಲಿಂಗಾಯತ ಎಂದು ಕರೆಯುತ್ತಾರೆ. ಹೀಗೆ ಎಲ್ಲಾ ಪಂಚಮಸಾಲಿ ಜನಾಂಗದವರನ್ನು ಒಟ್ಟಾರೆ ಸೇರಿಸಿಕೊಂಡು, ಪಂಚಮಸಾಲಿ ಮೀಸಲಾತಿ ಹೋರಾಟ ಮುಂದುವರೆಯುತ್ತದೆ ಎಂದು ತಿಳಿಸಿದರು.
ಈ ಹಿಂದೆ ಮೀಸಲಾತಿಗೆ ಹೋರಾಟ ಮಾಡಿದಾಗ ಈಗಿನ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಸಂಧಾನಕ್ಕೆ ಬಂದು ನಮ್ಮ ಎಲ್ಲಾ ಸಮಸ್ಯೆಗಳನ್ನು ಆಲಿಸಿದ್ದಾರೆ. ಈಗ ಅವರೇ ಮುಖ್ಯಮಂತ್ರಿ ಆಗಿದ್ದಾರೆ. ಅವರ ಮತಕ್ಷೇತ್ರ ಶಿಗ್ಗಾಂವ್ನಲ್ಲಿ ಪಂಚಮಸಾಲಿ ಜನಾಂಗದವರು ಸಾಕಷ್ಟು ಜನ ಇದ್ದಾರೆ. ಹೀಗಾಗಿ, ಮೀಸಲಾತಿ ನೀಡುತ್ತಾರೆ ಎಂದು ಆಶಾ ಭಾವನೆಯನ್ನು ವ್ಯಕ್ತಪಡಿಸಿದರು.
ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದ ಸಮಯದಲ್ಲಿ ಸೆಪ್ಟೆಂಬರ್ ಒಳಗೆ ಮೀಸಲಾತಿ ನೀಡುವ ಬಗ್ಗೆ ಭರವಸೆ ನೀಡಿದ್ದರು. ಆದರೆ, ಇನ್ನು ಕೆಲ ದಿನಗಳಲ್ಲಿ ಸರ್ಕಾರ ಸೂಕ್ತ ತೀರ್ಮಾನ ತೆಗೆದುಕೊಳ್ಳದೆ ಇದ್ದಲ್ಲಿ, ಮತ್ತೆ 20 ಲಕ್ಷ ಜನಸ್ತೋಮ ಸೇರಿಸಿ, ಬೃಹತ್ ಪಾದಯಾತ್ರೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.
ಅವರಿಗೂ ಶಕ್ತಿಯಿದೆ : ಬಸವನಗೌಡ ಪಾಟೀಲ್ ಯತ್ನಾಳ್ ಅವರಿಗೆ ಸಚಿವ ಸ್ಥಾನ ಕೈತಪ್ಪಿದ ವಿಚಾರವಾಗಿ ಅವರು ಮಾತನಾಡಿದರು. ಬಸವನಗೌಡ ಪಾಟೀಲ್ ಯತ್ನಾಳ್ ಮತ್ತು ಸಿ ಪಿ ಯೋಗೇಶ್ವರ್ಗೆ ಮಂತ್ರಿ ಸ್ಥಾನ ನೀಡಬಾರದು ಎಂದು ಬಿಎಸ್ವೈ ಪಟ್ಟು ಹಿಡಿದಿದ್ರು ಎಂದು ಕೇಳಿ ಬಂತು. ಅವರೇನೂ ಸಣ್ಣವರಲ್ಲ. ಅವರಿಗೂ ಶಕ್ತಿಯಿದೆ, ತಾಕತ್ತು ಇದೆ ಎಂದರು.
ಬಿಜೆಪಿಯ ಹಿರಿಯ ಮನುಷ್ಯ : ನಮ್ಮದು ಪಕ್ಷಾತೀತ ಪಂಚಮಸಾಲಿ ಮೀಸಲಾತಿ ಹೋರಾಟ. ಈ ಹೋರಾಟದಲ್ಲಿ ನಾನು ಕಾಂಗ್ರೆಸ್ ಪಕ್ಷದವನಾದ್ರೂ ಕೂಡ ಪಕ್ಷ ಬದಿಗೊತ್ತಿ ನಿಂತಿದ್ದೇನೆ. ಯತ್ನಾಳ್‌ರಿಗೆ ಮಂತ್ರಿಸ್ಥಾನ ನೀಡಬೇಕಿತ್ತು. ಆದರೆ, ಅದು ಅವರ ವೈಯಕ್ತಿಕ ವಿಚಾರ. ಅವರು ಬಿಜೆಪಿಯ ಹಿರಿಯ ಮನುಷ್ಯ. ಅವರ ವಿಷಯದಲ್ಲಿ ಕುತಂತ್ರ ನಡೆದಿದೆ. ಕುತಂತ್ರ ಇದ್ದೇ ಇರುತ್ತಲ್ಲ. ರಾಜಕೀಯದಲ್ಲಿ ಅದೆಲ್ಲಾ ಬೇಡ ಎಂದು ತಿಳಿಸಿದರು.
ಓದಿ: ತವರೂರಿಗೆ ಕೇಂದ್ರ ಸಚಿವ ಎ ನಾರಾಯಣಸ್ವಾಮಿ.. ಸಂಭ್ರಮದ ವೇಳೆ ಕೋವಿಡ್ ನಿಯಮಗಳೆಲ್ಲ ಗಾಳಿಗೆ