ಬಾಗಲಕೋಟೆ : ಉಪಸಭಾಪತಿ ಧರ್ಮೇಗೌಡ ಅವರ ಆತ್ಮಹತ್ಯೆ ನಿರ್ಧಾರ ನನಗೆ ದಿಗ್ಭ್ರಮೆ ಮೂಡಿಸಿದೆ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಎಸ್ ಆರ್ ಪಾಟೀಲ್ ತಿಳಿಸಿದ್ದಾರೆ.
ಉಪಸಭಾಪತಿ ಧರ್ಮೇಗೌಡ ಅವರ ಆತ್ಮಹತ್ಯೆ ಪ್ರಕರಣ ಬಗ್ಗೆ ಬಾಗಲಕೋಟೆಯಲ್ಲಿ ಪ್ರತಿಕ್ರಿಯೆ ನೀಡಿದ ಎಸ್.ಆರ್.ಪಾಟೀಲ್, ಧರ್ಮೇಗೌಡ ಅವರ ಆತ್ಮಹತ್ಯೆ ಯಕ್ಷಪ್ರಶ್ನೆಯಾಗಿದೆ. ಅವರು ಸರಳ, ಸಜ್ಜನಿಕೆ ರಾಜಕಾರಣಿ. ಅವರ ಆತ್ಮಹತ್ಯೆ ನಿರ್ಧಾರ ಬೇಸರದ ಸಂಗತಿಯಾಗಿದೆ ಎಂದರು.
ಆತ್ಮಕ್ಕೆ ಶಾಂತಿ ಸಿಗಲಿ, ಕುಟುಂಬಕ್ಕೆ ದೇವರು ದುಃಖ ತಡೆಯುವ ಶಕ್ತಿ ಕೊಡಲಿ ಎಂದ ಅವರು, ಡೆತ್ನೋಟ್ ಇರೋದನ್ನು ಮಾಧ್ಯಮಗಳ ಮೂಲಕ ನೋಡಿದ್ದೇನೆ. ಆ ಬಗ್ಗೆ ಸ್ಪಷ್ಟವಾಗಿ ತಿಳಿಯುವವರೆಗೂ ಏನೂ ಹೇಳೋಕೆ ಆಗಲ್ಲ. ಸಭಾಪತಿ ಕುರ್ಚಿಯಲ್ಲಿ ಧರ್ಮೇಗೌಡ ಅವರನ್ನು ಕುಳಿತುಕೊಳ್ಳಲು ಪ್ರಚೋದನೆ ಮಾಡಿದವರು, ಆತ್ಮಶೋಧನೆ ಮಾಡಿಕೊಳ್ಳಬೇಕಿದೆ ಎಂದರು.
ಓದಿ: ಎಸ್ ಎಲ್ ಧರ್ಮೇಗೌಡ ಆತ್ಮಹತ್ಯೆ ವೈಯಕ್ತಿಕ ವಿಚಾರವೋ, ರಾಜಕಾರಣವೋ ಗೊತ್ತಿಲ್ಲ : ಡಿಕೆಶಿ
ಪ್ರಚೋದನೆ ಮಾಡಿದವರೆ ಆತ್ಮಹತ್ಯೆಗೆ ಕಾರಣವಾ ಎಂಬ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ಸಭಾಪತಿ ಇದ್ದಾಗಲೂ ಆ ಸ್ಥಾನದಲ್ಲಿ ಕೂರೋದು ತಪ್ಪು. ಉಪ ಸಭಾಪತಿಯನ್ನು ಅನಧಿಕೃತವಾಗಿ ಸಭಾಪತಿ ಕುರ್ಚಿಯಲ್ಲಿ ಕೂರಿಸುವ ಮೂಲಕ ಮುಗ್ದ ರಾಜಕಾರಣಿಯನ್ನು ತಪ್ಪು ದಾರಿಗೆ ಎಳೆದರು. ಪೀಠದ ಘನತೆ, ಪಾವಿತ್ರ್ಯತೆಯನ್ನು ಕಾಪಾಡುವ ದೃಷ್ಠಿಯಿಂದ ಕಾಂಗ್ರೆಸ್ ಸದಸ್ಯರು ಅವರನ್ನು ಸಭಾಪತಿ ಸ್ಥಾನದಿಂದ ಉಪಸಭಾಪತಿ ಸ್ಥಾನದಲ್ಲಿ ಕೂರಿಸಿದ್ದರು.
ಕೈ ಸದಸ್ಯರು ಪೀಠದ ಘನತೆ ಗೌರವವನ್ನು ಹೆಚ್ಚಿಸಿದರು. ಧರ್ಮೇಗೌಡ ಮುಗ್ಧತೆಯನ್ನು ಯಾರಾದರೂ ದುರುಪಯೋಗ ಪಡಿಸಿದವರು ತಮ್ಮ ಆತ್ಮಶೋಧನೆ ಮಾಡಿಕೊಳ್ಳಬೇಕು ಎಂದು ತಿಳಿಸಿದರು. ಕಾನೂನು ಪ್ರಕಾರ ತನಿಖೆ ಆದಾಗ ಯಾರು ಕಾರಣ ಎನ್ನುವುದು ಗೊತ್ತಾಗುತ್ತೆ. ಇದೇ ಕಾರಣ ಆದ್ರೆ ಸಭಾಪತಿ ಪೀಠದ ಮೇಲೆ ಕೂರಿಸಿದವರು ನನ್ನ ದೃಷ್ಠಿಯಲ್ಲಿ ತಪ್ಪಿತಸ್ಥರು ಎಂದರು.