ಬಾಗಲಕೋಟೆ: ರಮೇಶ್ ಜಾರಕಿಹೊಳಿ ರಾಜೀನಾಮೆ ನೀಡೋದಿಲ್ಲ. ಅವರು ಮತ್ತೆ ಮಂತ್ರಿಯಾಗುತ್ತಾರೆ. ನಾನು ಮತ್ತು ಅವರು ಒಂದೇ ಜಿಲ್ಲೆಯವರು. ಅವರು ರಾಜೀನಾಮೆ ಕೊಡುವ ಪ್ರಸಂಗ ಬರುವುದಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಉಮೇಶ ಕತ್ತಿ ತಿಳಿಸಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ರಮೇಶ್ ಜಾರಕಿಹೊಳಿ ದುಃಖ ಹೇಳಿಕೊಂಡಿದ್ದು ನಿಜ. ಅವರೊಬ್ಬ ಸರಳ ವ್ಯಕ್ತಿ, ಆ ವ್ಯಕ್ತಿ ದಿಢೀರ್ ನಿರ್ಧಾರ ತೆಗೆದುಕೊಳ್ಳೋದಿಲ್ಲ. ಮುಂದಿನ ಎರಡು ವರ್ಷ ಶಾಸಕರಾಗಿಯೂ ಇರುತ್ತಾರೆ. ಪ್ರಸಂಗ ಬಂದರೆ ಮತ್ತೆ ಮಂತ್ರಿಯಾಗುತ್ತಾರೆ ಎಂದರು.
ರಮೇಶ್ ಜಾರಕಿಹೊಳಿ ಮಂತ್ರಿ ಆಗೋದನ್ನ ಮುಖ್ಯಮಂತ್ರಿ ಅವರನ್ನ ಕೇಳಬೇಕು. ನಾನು ಮುಖ್ಯಮಂತ್ರಿ ಅಲ್ಲ. ನಾವು ಆಗಾಗ ಮಾತನಾಡುತ್ತೇವೆ. ಹೀಗಾಗಿ ಅವರು ರಾಜೀನಾಮೆ ಕೊಡುವ ಪ್ರಸಂಗ ಬರೋದಿಲ್ಲ ಅನ್ನೋದು ನನ್ನ ಅನಿಸಿಕೆ ಎಂದರು. ಇದೇ ಸಮಯದಲ್ಲಿ ಬಿಜೆಪಿಯಲ್ಲಿ ಆಂತರಿಕ ಕಚ್ಚಾಟ ಕುರಿತು ಎಸ್.ಆರ್. ಪಾಟೀಲ್ ಹೇಳಿಕೆಗೆ ಕತ್ತಿ ತಿರುಗೇಟು ನೀಡಿದರು.
ಮೊದಲು ತಾವು ಕಾಂಗ್ರೆಸ್ ಸರಿ ಮಾಡಿ, ಆಮೇಲೆ ಬಿಜೆಪಿ ಬಗ್ಗೆ ಮಾತನಾಡಿ. ಕಾಂಗ್ರೆಸ್ ಪಕ್ಷದ ಮುಖಂಡರಾಗಿ, ಪಕ್ಷದ ಮುಂದಿನ ಸಿಎಂ ಯಾರು ಅಂತಾ ತೀರ್ಮಾನ ಮಾಡಿ. ಕೈ ಸಿಎಂ ಅಭ್ಯರ್ಥಿ ಸಿದ್ದರಾಮಯ್ಯನವರೋ, ಡಿಕೆಶಿಯೋ ಅಥವಾ ದಲಿತ ನಾಯಕನೋ ಮೊದಲು ತೀರ್ಮಾನ ಮಾಡಿರಿ. ಆಮೇಲೆ ಮುಂದಿನದ್ದು ತೀರ್ಮಾನ ಮಾಡೋಣ ಎಂದು ಟಾಂಗ್ ನೀಡಿದರು.
ರಾಜ್ಯದಲ್ಲಿ ಮೂರನೇ ಅಲೆ ಬರುತ್ತಿದೆ. ಇಂತಹ ರೋಗಗಳ ಅಲೆಗಳ ಜೊತೆ ಹೇಗೆ ಬದುಕಬೇಕು ಅನ್ನೋದನ್ನ ನಾವು - ನೀವು ಸೇರಿ ಕಲಿತುಕೊಳ್ಳಬೇಕು ಎಂದರು.
ಶಾಲಾ ಮಕ್ಕಳ ವಿದ್ಯಾಭ್ಯಾಸ ನಡಿಬೇಕು. ವ್ಯಾಪಾರ - ವಹಿವಾಟು ನಡಿಬೇಕು. ಕೊರೊನಾ ಜೊತೆ ಹೇಗೆ ಬದುಕಬೇಕು ಅನ್ನೋ ತೀರ್ಮಾನ ನಾವು - ನೀವೇ ಮಾಡಬೇಕು. ತಜ್ಞರು ಸಲಹೆ ಕೊಟ್ಟಿದ್ದಾರೆ. ಸರ್ಕಾರ ಅದರ ಬಗ್ಗೆ ಚಿಂತನೆ ಮಾಡುತ್ತಿದೆ. ಇನ್ನು ಕೆಲವೇ ದಿನಗಳಲ್ಲಿ ತೀರ್ಮಾನ ಜಾರಿಗೆ ಬರುತ್ತವೆ ಎಂದರು.