ಬಾಗಲಕೋಟೆ: ಬಿಜೆಪಿ ಹಾಗೂ ಮುಖ್ಯಮಂತ್ರಿ ಯಡಿಯೂರಪ್ಪ ಅವರು ವಿರುದ್ದ ಹೇಳಿಕೆ ನೀಡಿದ್ದ ಕಾಂಗ್ರೆಸ್ನ ಮುಖಂಡ ಆರ್.ಬಿ ತಿಮ್ಮಾಪೂರ ಅವರ ಕುರಿತು ಬಿಜೆಪಿ ಪಕ್ಷದ ಶಾಸಕ ವೀರಣ್ಣ ಚರಂತಿಮಠ ಪ್ರತಿಕ್ರಿಯೆ ನೀಡಿದ್ದಾರೆ.
ವಿಧಾನ ಪರಿಷತ್ ಸದಸ್ಯ ಆರ್.ಬಿ. ತಿಮ್ಮಾಪೂರ, 'ಬಿಜೆಪಿಯಲ್ಲಿ ಲಿಂಗಾಯುತ ನಾಯಕನನ್ನು ಮುಗಿಸಲು ಷಡ್ಯಂತ್ರ ನಡೆಯುತ್ತಿದೆ. ನಳೀನ್ಕುಮಾರ್ ಕಟೀಲ್ ಮತ್ತು ಬಿ.ಎಸ್. ಸಂತೋಷ ಸೇರಿ ಬಿಎಸ್ವೈ ವಿರುದ್ಧ ಪಿತೂರಿ ನಡೆಸಿದ್ದಾರೆ. ಚುನಾವಣೆಯಲ್ಲಿ ಬಿಎಸ್ವೈ ಮುಖ ನೋಡಿ ಲಿಂಗಾಯತರು ಓಟು ಹಾಕಿದ್ದಾರೆ. ಆದರೆ, ನಳೀನ್ಕುಮಾರ್ ಕಟೀಲ್ ಮುಖ ನೋಡಿ ಯಾರೂ ಓಟು ಹಾಕಿದ್ದಾರಾ? ಜನರ ಆಶೀರ್ವಾದ ಪಡೆಯದ ಕೆಲವರು, ಲಿಂಗಾಯತ ನಾಯಕ ಬಿಎಸ್ವೈ ಮುಗಿಸಲು ಸಂಚು ಹೂಡಿದ್ದಾರೆ. ಸಂಚಿಗೆ ಸಿಕ್ಕು ಯಡಿಯೂರಪ್ಪ ಅಸಹಾಯಕರಾಗಿದ್ದಾರೆ' ಎಂದು ವ್ಯಂಗ್ಯವಾಡಿದ್ದರು.
ಬಸವೇಶ್ವರ ವಿದ್ಯಾವರ್ಧಕ ಸಂಘದ ಮಿನಿ ಸಭಾಂಗಣದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡುತ್ತಾ ತಿಮ್ಮಾಪೂರ ಅವರ ಹೇಳಿಕೆಗೆ ಬಿಜೆಪಿ ಶಾಸಕ ವೀರಣ್ಣ ಚರಂತಿಮಠ ತಿರುಗೇಟು ನೀಡಿದರು. 'ತಿಮ್ಮಾಪೂರ ಅವರ ತಲೆ ಸರಿ ಇಲ್ಲ. ಧಾರವಾಡಕ್ಕೆ ಹೋಗಿ ಆಸ್ಪತ್ರೆಯಲ್ಲಿ ತಪಸಾಣೆ ಮಾಡಿಸಿಕೊಳ್ಳಲಿ. ತಮ್ಮನ್ನು ತಾವು ಮೊದಲಿ ನೋಡಿಕೊಳ್ಳಲಿ. ನಮ್ಮದು ನೋಡುವುದು ಬೇಡ. ಮೊದಲು ಅವರ ನಡುವೆ ಕಚ್ಚಾಟಗಳು ನಡೆದಿವೆ. ಅವುಗಳನ್ನು ಸರಿಪಡಿಸಕೊಳ್ಳಲಿ. ನಮ್ಮ ಪಕ್ಷದ ಬಗ್ಗೆ ಅವರು ಮಾತನಾಡುವುದು ಬೇಡ. ಕೇಂದ್ರದಲ್ಲೂ, ರಾಜ್ಯದಲ್ಲೂ ನಮ್ಮ ಪಕ್ಷ ಬಲಿಷ್ಠವಿದೆ. ಯಡಿಯೂರಪ್ಪ ಹಾಗೂ ಕಟೀಲ್ ನಡುವೆ ಒಳ್ಳೆಯ ಸಂಬಂಧವಿದೆ' ಎಂದಿದರು.